

ಬೆಳಗಾವಿ: ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಜುಲೈ ಮಾಸಾಂತ್ಯದೊಳಗೆ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 68,636 ಅಂತ್ಯೋದಯ, 10,80,880 ಬಿಪಿಎಲ್ ಹಾಗೂ 3,21,237 ಎಪಿಎಲ್ ಪಡಿತರ ಚೀಟಿಗಳು ಸೇರಿ ಒಟ್ಟು 14,70,753 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಜುಲೈ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಪಡಿತರ ಚೀಟಿದಾರರು ಬಯೋಮೆಟ್ರಿಕ್ ನೀಡಿದ ತಕ್ಷಣವೇ ಪಡಿತರ ಪಡೆಯಬಹುದು. ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಈ ಮಾಹೆ ಅಂತಿಮ ಗಡುವು ನೀಡಲಾಗಿದೆ.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು. ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಜರುಗಿಸಲಾಗುವುದು. ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ ಕಚೇರಿ ಅಥವಾ ಜಂಟಿ ನಿರ್ದೇಶಕರ ಕಚೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
-----
ಯಾರಿಗೆ ಎಷ್ಟು ?
ಅಂತ್ಯೋದಯ (ಎಎವೈ) ಪ್ರತಿ ಪಡಿತರ ಚೀಟಿಗೆ ಅಕ್ಕಿ-35 ಕೆ.ಜಿ. ಉಚಿತ, ಪಿ.ಎಚ್.ಎಚ್ (ಬಿಪಿಎಲ್) (ಆದ್ಯತಾ) ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ಅಕ್ಕಿ-05 ಕೆ.ಜಿ. ಉಚಿತ, ಎನ್‌ಪಿಹೆಚ್‌ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ) - ಏಕ ಸದಸ್ಯ ಪಡಿತರ ಚೀಟಿಗೆ ಅಕ್ಕಿ-05 ಕೆ.ಜಿ, 2 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ ಅಕ್ಕಿ-10 ಕೆ.ಜಿ. ಪ್ರತಿ ಕೆ.ಜಿ.ಗೆ 15ರೂ.ಇರಲಿದೆ. ಅಂತಾರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯವವರಿಗೆ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ 5 ಕೆ.ಜಿ ಪ್ರತಿ ಸದಸ್ಯರಿಗೆ ಉಚಿತವಾಗಿರುತ್ತದೆ.