ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ

DEVADURGA MANAVI
Published on

ದೇವದುರ್ಗ: ಪಡಿತರ ಚೀಟಿ ತಿದ್ದುಪಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಸಿಪಿಐಎಂಎಲ್ ಪ್ರಮುಖರು ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿನ ದೋಷಗಳನ್ನು ಸರಿಪಡಿಸಲು ಆ.23ರವರೆಗೆ ಅವಕಾಶ ಕಲ್ಪಿಸಿದೆ. ನಿಗದಿತ ದಿನಗಳಂದು ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ಅವಕಾಶವಿದ್ದು, ಸರ್ವರ್ ಸಮಸ್ಯೆ ಎದುರಾಗುತ್ತಿದೆ. ನಿತ್ಯ ಕೇಂದ್ರವೊಂದರಲ್ಲಿ ಐದಾರು ಕಾರ್ಡ್‌ಗಳ ತಿದ್ದುಪಡಿಯೂ ಆಗದಂತ ಸ್ಥಿತಿ ಎದುರಾಗಿದೆ. ಬಹುತೇಕ ಫಲಾನುಭವಿಗಳು ಕೂಲಿಕಾರರು, ರೈತರು ಆಗಿದ್ದು, ಕೆಲಸ ಬಿಟ್ಟು ಕಚೇರಿಗೆ ಅಲೆಯುವಂತಾಗಿದೆ ಎಂದು ದೂರಿದರು.

ಪಡಿತರ ಚೀಟಿ ತಿದ್ದುಪಡಿ ಅವಧಿಯನ್ನು ಒಂದು ವಾರ ಮುಂದೂಡಿ ಹೆಚ್ಚುವರಿ ಸಮಯ ನೀಡಬೇಕು. ಸರ್ವರ್ ಸಮಸ್ಯೆ ಸರಿಪಡಿಸಬೇಕು. ತಿದ್ದುಪಡಿಗೆ ಖಾಸಗಿ ಕಂಪ್ಯೂಟರ್ ಕೇಂದ್ರದವರು ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಶಿವನಗೌಡ ಉಟ್ಟಿ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net