ಸದ್ಯಕ್ಕಿಲ್ಲ ರೇಷನ್ ಕಾರ್ಡ್ ಪರಿಷ್ಕರಣೆ

ration card
Published on

ಮಂಗಳೂರು: ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು, ಆದರೆ ಪರಿಷ್ಕರಣೆ ಸದ್ಯಕ್ಕಿಲ್ಲ. ಸಾಫ್ಟ್‌ವೇರನ್ನು ಸರ್ಕಾರ ಹಲವು ಕಾರಣಗಳಿಂದ ಬ್ಲಾಕ್ ಮಾಡಿರುವುದು ಇದಕ್ಕೆ ಕಾರಣ.

ರೇಷನ್ ಕಾರ್ಡ್‌ಗೆ ಪಬ್ಲಿಕ್ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಸಾಫ್ಟ್‌ವೇರ್ ತೆರೆಯಲು ಇನ್ನು ಕೆಲ ತಿಂಗಳು ಬೇಕಾಗಬಹುದು. ಬಳಿಕವೇ ಹೊಸ ರೇಷನ್ ಕಾರ್ಡ್ ಸಿಗಲು ಸಾಧ್ಯ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ದ.ಕ.ಜಿಲ್ಲೆಯಲ್ಲಿ ಜನರಿಂದ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಹಲವು ರೀತಿಯ ಅಹವಾಲುಗಳು, ದೂರುಗಳಿವೆ. ಅಂಥವರು ನಮ್ಮ ತಾಲೂಕು ಕಚೇರಿ ಅಥವಾ ಜಿಲ್ಲಾ ಕಚೇರಿಗೆ ಬಂದು ಅನುಮಾನ ಬಗೆಹರಿಸಿಕೊಳ್ಳಬಹುದು ಎಂದು ಆಹಾರ ಇಲಾಖೆ ಉಪನಿರ್ದೇಶಕಿ ರಮ್ಯ ಸಿ.ಆರ್.‘ವಿಜಯವಾಣಿ’ಗೆ ತಿಳಿಸಿದರು.

ಸಾರ್ವಜನಿಕರಿಗೆ ಮಾಹಿತಿ, ನೆರವು ನೀಡಲು ಇಲಾಖೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿದ್ದರೆ ಹೆಲ್ಪ್‌ಡೆಸ್ಕನ್ನೂ ತೆರೆಯಲಾಗುವುದು. ಹೊಸ ಪಡಿತರ ಚೀಟಿಗೆ ಮಂಗಳೂರು ಒನ್ ಅಥವಾ ಖಾಸಗಿ ವ್ಯವಸ್ಥೆಯ ವೆಬ್‌ಸೈಟ್ ಮೂಲಕವೂ ಅರ್ಜಿ ಹಾಕಬಹುದು ಎಂದರು.

ಸಕಾಲ ಸೇವೆಗಳು ಲಭ್ಯ: ಆಹಾರ ಇಲಾಖೆ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ನೀಡುತ್ತಿಲ್ಲ. ಉಳಿದಂತೆ ಇಲಾಖೆಗೆ ಸಂಬಂಧಿಸಿದ ಇತರ ಅನೇಕ ಸೇವೆಗಳನ್ನು ಸಕಾಲ ಅರ್ಜಿ ಹಾಕುವ ಮೂಲಕ ಪಡೆಯಬಹುದು. ಆಧಾರ್ ಕಾರ್ಡ್‌ಗೆ ಅನುಗುಣವಾಗಿ ರೇಷನ್ ಕಾರ್ಡ್‌ನಲ್ಲಿ ಬದಲಾವಣೆ, ವಿಳಾಸ ಬದಲಾವಣೆ, ರೇಷನ್ ಅಂಗಡಿ ಬದಲಾವಣೆ, ಹೆಸರು ಸೇರ್ಪಡೆ ಅಥವಾ ಅಳಿಸುವುದು ಇತ್ಯಾದಿ ಸೇವೆಗಳು ಸಕಾಲ ವ್ಯಾಪ್ತಿಗೆ ಬರುತ್ತವೆ.

ಮಧ್ಯವರ್ತಿಗಳಿಂದ ದೂರವಿರಿ: ಮಧ್ಯವರ್ತಿಗಳು ಹೊಸ ರೇಷನ್ ಕಾರ್ಡ್ ಕೊಡಿಸುವುದಾಗಿ ಹೇಳಿ ಹಣ ಪಡೆಯುತ್ತಾರೆ, ಕೊನೆಗೆ ಕಾರ್ಡ್ ಬಂದಿಲ್ಲ, ಇಲಾಖೆಯ ತಪ್ಪು ಎಂದು ದೂರುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ಹಾಗಾಗಿ ಆಹಾರ ಇಲಾಖೆ ಸೇವೆಯ ಮಾಹಿತಿ ಬೇಕಿದ್ದರೆ ನಮ್ಮನ್ನೇ ನೇರವಾಗಿ ಸಂಪರ್ಕಿಸಿ ಎನ್ನುತ್ತಾರೆ ಅಧಿಕಾರಿಗಳು. ಮಾಹಿತಿಗೆ: ಮಂಗಳೂರು: 0824-2423622, ಮಂಗಳೂರು ತಾಲೂಕು 2412033, ಬಂಟ್ವಾಳ- 08255-232125, ಪುತ್ತೂರು 08251-231349, ಬೆಳ್ತಂಗಡಿ 08256-232383, ಸುಳ್ಯ ತಾಲೂಕು 08257-231330.

ಮಧ್ಯವರ್ತಿಗಳ ಬಳಿ ರೇಷನ್ ಕಾರ್ಡ್ ಮಾಡಿಸಲು ಮುಂದಾಗಬೇಡಿ. ಸದ್ಯ ಅರ್ಜಿ ಮಾತ್ರ ಹಾಕಬಹುದು. ಅದಕ್ಕಾಗಿ ಮಂಗಳೂರು ಒನ್‌ಗೆ ಹೋಗಬಹುದು. ಆದರೆ ಅರ್ಜಿ ವಿಲೇವಾರಿ ಸದ್ಯ ಆಗುತ್ತಿಲ್ಲ. ಮಾಹಿತಿ ಅಗತ್ಯವಿದ್ದರೆ ಆಹಾರ ಇಲಾಖೆ ಅಧಿಕಾರಿಗಳನ್ನೇ ಸಂಪರ್ಕಿಸಿ.

-ರಮ್ಯಾ ಸಿ.ಆರ್

ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net