

ಹುಬ್ಬಳ್ಳಿ: ಹು ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಣೆ, ಸ್ಪಂದನೆ ಬಗ್ಗೆ ಲೋಕ ಸ್ಪಂದನ ಕ್ಯೂಆರ್’ ಕೋಡ್ ಮೂಲಕ ರೇಟಿಂಗ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಹು-ಧಾ ಮಹಾನಗರ ವ್ಯಾಪ್ತಿಯ 21 ಪೊಲೀಸ್ ಠಾಣೆಗೆ ಹೋದರೆ ಬಾಗಿಲಲ್ಲಿಯೇ ಲೋಕ ಸ್ಪಂದನದ ‘ಕ್ಯೂಆರ್’ ಕೋಡ್ ಪಟ್ಟಿ ಲಗತ್ತಿಸಲಾಗಿರುತ್ತದೆ.
ಅಲ್ಲದೆ, ವಿಸಿಟರ್ಸ್ ಬುಕ್ ಎಂಟ್ರಿಯೂ ಇರುತ್ತದೆ. ಇದಕ್ಕೆ ಎಸ್‌ಎಚ್‌ಒ ಅವರನ್ನು ನೇಮಕ ಮಾಡಲಾಗಿರುತ್ತದೆ.
ಅಲ್ಲಿನ ಸಿಬ್ಬಂದಿ ವರ್ತಿಸಿದ ರೀತಿ, ಸಮಸ್ಯೆಗೆ ಸಿಕ್ಕ ಪರಿಹಾರದಿಂದ ತೃಪ್ತರಾಗಿರಬಹುದು, ಇಲ್ಲದೇ ಇರಬಹುದು.
ಈ ಕುರಿತು ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಕಾೃನ್ ಮೂಲಕ ಫೀಡ್‌ಬ್ಯಾಕ್ ಸಲ್ಲಿಸಬಹುದು.
ಬೆಂಗಳೂರು ಒಂದು ವಿಭಾಗದಲ್ಲಿಯ ನಂತರ ಹು-ಧಾ ಪೊಲೀಸ್ ಆಯುಕ್ತಾಯಲಯವು ಇಂಥ ಮಹತ್ವದ ತಂತ್ರಜ್ಞಾನ ಅಳವಡಿಸಿಕೊಂಡಿದೆ.
ಏನೇನು ಮಾಡಬೇಕು?: ಸ್ಕಾೃನ್ ಮಾಡಿ ಅದರಲ್ಲಿ ವಿಸಿಟರ್ಸ್ ಐಡಿ ಹಾಕಿದಾಗ ಫೀಡ್ ಬ್ಯಾಕ್ ಅರ್ಜಿ ತೆರೆದುಕೊಳ್ಳುತ್ತದೆ.
ಅದರಲ್ಲಿ ಕೇಳಿರುವ 10 ಅಂಶಗಳ ಮಾಹಿತಿ ಭರ್ತಿ ಮಾಡಬೇಕು. ಪೊಲೀಸರು ಸ್ಪಂದಿಸಿರುವ ರೀತಿಯ ಕುರಿತಾದ ಅಭಿಪ್ರಾಯವನ್ನು ಇದು ಒಳಗೊಂಡಿರುತ್ತದೆ.
ಕ್ಯೂಆರ್ ಕೋಡ್ ಸ್ಕಾೃನ್ ಮಾಡುವವರು ಆಯಾ ಠಾಣೆಗಳ ಆಡಳಿತ ವೈಖರಿ, ಸೇವೆ ಆಧರಿಸಿ ‘ಸ್ಟಾರ್’ಗಳನ್ನು ನೀಡಬಹುದು.
ಫೆಬ್ರವರಿಯಿಂದ ಆರಂಭವಾಗಿರುವ ಲೋಕಸ್ಪಂದನಕ್ಕೆ ಇಲ್ಲಿಯವರೆಗೆ 4ಸಾವಿರಕೂ ಹೆಚ್ಚು ಜನರು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ, ಬಹಳಷ್ಟು ಠಾಣೆಗಳಿಗೆ 5 ಸ್ಟಾರ್ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರತಿ ಫೀಡ್‌ಬ್ಯಾಕ್ ಮಾಹಿತಿಯು ನೇರವಾಗಿ ಘಟಕದ ಮುಖ್ಯಸ್ಥರಿಗೆ ಲಭಿಸುತ್ತದೆ. ಪೊಲೀಸ್ ಠಾಣೆಯ ಸಿಬ್ಬಂದಿಯ ಗುಣಾವಗುಣಗಳನ್ನು ಪರಿಶೀಲಿಸಲು ಇದರಿಂದ ಸಾಧ್ಯವಾಗಲಿದೆ.
5 ಸ್ಟಾರ್ ರೇಟಿಂಗ್ ಪಡೆದ ಠಾಣೆಗಳು: ವಿವಿಧ ಪೊಲೀಸ್ ಠಾಣೆಗಳಿಗೆ ಸಮಸ್ಯೆ ಹೊತ್ತುಕೊಂಡು ಹೋಗುವ ಜನರು ಸ್ಟಾರ್ ಆಧಾರದಲ್ಲಿ ಫೀಡ್ ಬ್ಯಾಕ್ ನೀಡಿದ್ದಾರೆ.
5 ಸ್ಟಾರ್ ಪಡೆದಿರುವ ಕೇಶ್ವಾಪುರ ಠಾಣೆ ಮೊದಲ ಸ್ಥಾನದಲ್ಲಿದೆ (ಶೇ.99), ಕಮರಿಪೇಟೆ (ಶೇ.98), ಕಸಬಾಪೇಟೆ (ಶೇ. 96),
ಉಪನಗರ ಠಾಣೆ (ಶೇ. 95), ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ (ಶೇ. 93) ಕ್ರಮವಾಗಿವೆ. ಇದರಲ್ಲಿ 1,2,3,4 ಸ್ಟಾರ್ ಪಡೆದ ಠಾಣೆಗಳೂ ಇವೆ.
ಕಡಿಮೆ ರೇಟಿಂಗ್ ಪಡೆದ ಠಾಣೆಯ ಸಿಬ್ಬಂದಿಗೆ ಆಯುಕ್ತಾಲಯದಿಂದ ಚೆನ್ನಾಗಿ ಸೇವೆ ಸಲ್ಲಿಸಲು ಮತ್ತು ಕರ್ತವ್ಯ ನಿರ್ವಹಣೆಯ ತರಬೇತಿ ನೀಡಲಾಗುತ್ತದೆ.
ಉತ್ತಮ ಕರ್ತವ್ಯ ನಿರ್ವಹಣೆ ಮಾಡಿದ್ದ ಸಿಬ್ಬಂದಿಗೆ ನಗದು ರೂಪದಲ್ಲಿ ಬಹುಮಾನ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.