ಬ್ಯಾಟರಾಯನಪುರದಲ್ಲಿ ಅದ್ದೂರಿಯಾಗಿ ನಡೆದ ರಥೋತ್ಸವ

btp rata
Published on

ಬೆಂಗಳೂರು: ಹೊಸ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಶ್ರೀ ಕೋದಂಡರಾಮಸ್ವಾಮಿಯವರ 75ನೇ ಬ್ರಹ್ಮರಥೋತ್ಸವ ಗುರುವಾರ ಅದ್ದೂರಿಯಾತಿ ಜರುಗಿತು.

ಬೆಳಗ್ಗೆ ದೇವಾಲಯದಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಸೀತಾ ಸಮೇತ ಶ್ರೀ ರಾಮದೇವರನ್ನು ಹೂವಿನಿಂದ ಅಲಂಕೃತ ರಥದಲ್ಲಿರಿಸಿ ತೇರನ್ನು ಎಳೆಯಲಾಯಿತು. ಬ್ಯಾಟರಾಯನಪುರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಜಕ್ಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಅಸಂಖ್ಯ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡರು. ಬಾಳೇಹಣ್ಣು-ದವನವನ್ನು ರಥದ ಮೇಲೆ ಎಸೆದು ಜನರು ತಮ್ಮ ಭಕ್ತಿ-ಭಾವ ಸಮರ್ಪಿಸಿದರು.

ರಥೋತ್ಸವದ ಹಿನ್ನೆಲೆಯಲ್ಲಿ ಅಕ್ಷಯ ಅನ್ನದಾನ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಪ್ರಸಾದ ಸೇವಿಸಿದರು.

ಸ್ಥಳೀಯ ಶಾಸಕ, ಸಚಿವ ಕೃಷ್ಣಬೈರೇಗೌಡ, ಮಾಜಿ ರಾಜ್ಯಸಭಾ ಸದಸ್ಯ ಪ್ರೊ. ಎಂ.ವಿ.ರಾಜೀವ್ ಗೌಡ, ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ಸ್ಥಾಪಕರಾದ ಜೋಡಿದಾರ್ ಕುಟುಂಬದವರು, ಬ್ಯಾಟರಾಯನಪುರ ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ರಾಮನವಮಿ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯವರೆಗೂ ನಿತ್ಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರೆವೇರಲಿವೆ ಎಂದು ದೇಗುಲದ ಧರ್ಮದರ್ಶಿಯವರು ತಿಳಿಸಿದ್ದಾರೆ.

ಕಣ್ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:

ಸಂಜೆ ಶ್ರೀ ದೊಡ್ಡಮ್ಮ ಹಾಗೂ ಶ್ರೀ ಮಹೇಶ್ವರಮ್ಮನವರ ದೇಗುಲದ ಮುಂದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಕಣ್ಮನ ಸೆಳೆಯಿತು. ವಿದುಷಿ ಪೂಜಾಶ್ರೀ ಶಿಷ್ಯವೃಂದದಿಂದ ಭರತನಾಟ್ಯ, ರಾಜು ಎಲ್.ಎನ್. ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಆ ಬಳಿಕ ಹುಲಿಮಾವು ಯಕ್ಷ ಸಂಭ್ರಮ ಸಮಿತಿಯಿಂದ ‘ಶಿವಸಂಭೂತ ಪಂಜುರ್ಲಿ’ ಯಕ್ಷಗಾನ ಪ್ರದರ್ಶನ ನೆರೆದಿದ್ದ ಸಭಿಕರ ಮನಸೂರೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net