

ಕಡೂರು: ಮಲ್ಲೇಶ್ವರ ಗ್ರಾಮದ ಅಧಿದೇವತೆ ಶ್ರೀ ಸ್ವರ್ಣಾಂಬ ದೇವಿ ಬ್ರಹ್ಮ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಸ್ವರ್ಣಾಂಬ ದೇವಿ ಮೂಲಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿದ ನಂತರ ಗಜಾರೋಹಣೋತ್ಸವ ನಡೆಯಿತು. ನಂತರ ಕನ್ಯಕಾ ಪೂಜೆ, ಪುರಸ್ಸರ ಕಲ್ಯಾಣೋತ್ಸವ ನಡೆಸಲಾಯಿತು. ಬಳಿಕ ದೇವಿಯ ಉತ್ಸವಮೂರ್ತಿಯನ್ನು ಮೆರವಣಿಗೆಯಲ್ಲಿ ಹೊರತಂದು ಭಕ್ತರ ಮುಂದೆ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.
ಭಕ್ತರು ಅರಿಶಿಣ ಕುಂಕುಮ ಸಮರ್ಪಿಸಿದ ನಂತರ ಸ್ವರ್ಣಾಂಬ ದೇವಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಕದಳಿವೃಕ್ಷ ಛೇದನ ಮತ್ತು ಬಲಿಪೂಜೆ ನಡೆದ ನಂತರ ಭಕ್ತರು ಉತ್ಸಾಹದಿಂದ ರಥ ಎಳೆದು ಸಂಭ್ರಮಿಸಿದರು. ರಥದ ಕಲಶಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ಅರಳೀಮರದಮ್ಮ ಮತ್ತು ಚೌಡ್ಲಾಪುರ ಕರಿಯಮ್ಮ ಗ್ರಾಮ ದೇವರ ಉಪಸ್ಥಿತಿಯಲ್ಲಿ ನಡೆದ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ದೇವಿಪ್ರಸಾದ ಶರ್ಮ ಮತ್ತು ತಂಡದವರು ನೆರವೇರಿಸಿದರು.
ರಥಾರೋಹಣಕ್ಕೆ ಮುನ್ನ ಸ್ವರ್ಣಾಂಬ ದೇವಿಗೆ ಅರಿಶಿಣ ಸಮರ್ಪಣೆ ಇಲ್ಲಿ ನಡೆಯುವ ವಿಶೇಷ ಸೇವೆ. ರಥಕ್ಕೆ ತೆರಳುವ ಮುನ್ನ ದೇವಿ ವಿಗ್ರಹವನ್ನು ಮೂರು ಸುತ್ತು ಭಕ್ತರ ಮುಂದೆ ಪ್ರದಕ್ಷಿಣೆ ಹಾಕಲಾಗುತ್ತದೆ. ಮುತ್ತೈದೆಯರು ಅರಿಶಿಣ ಎರಚಿದರು. ಅರಿಶಿಣ ಸಮರ್ಪಣೆ ನಂತರವೇ ದೇವಿ ರಥವನ್ನೇರುವುದು ಇಲ್ಲಿನ ಸಂಪ್ರದಾಯ. ದೇವರನ್ನು ಹೊತ್ತವರು ಅರಿಶಿಣದಲ್ಲಿ ತೋಯ್ದು ಹೋಗಿರುತ್ತಾರೆ. ಇದಕ್ಕಾಗಿ ಕ್ವಿಂಟಾಲುಗಟ್ಟಲೆ ಅರಿಶಿಣ ಬಳಕೆಯಾಗುತ್ತದೆ.
ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಅಧ್ಯಕ್ಷ ಡಾ. ಎಂ.ಟಿ.ಸತ್ಯನಾರಾಯಣ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಧರ್ಮದರ್ಶಿಗಳಾದ ಎಂ.ಆರ್.ಧರ್ಮಣ್ಣ, ಎಂ.ಎಚ್.ಪುಟ್ಟಸ್ವಾಮಿ ಇತರರಿದ್ದರು.