ಶ್ರೀ ಬನಶಂಕರಿ ದೇವಿಯ ವಿಜೃಂಭಣೆಯ ರಥೋತ್ಸವ

IMG-20240125-WA0221
ಆಲೂರು ತಾಲೂಕಿನ ಮಗ್ಗೆ ಗ್ರಾಮ ಪಂಚಾಯಿತಿಗೆ ಸೇರಿದ ವೈ.ಎನ್.ಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
Published on

ಆಲೂರು: ಬೇಡಿದ ವರವನ್ನು ಕರುಣಿಸುವ, ಭಕ್ತರ ಪಾಲಿನ ಮಾತೆ ಎಂದೇ ಖ್ಯಾತವಾಗಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಾವಿರಾರು ಭಕ್ತಾದಿಗಳ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ಜರಗಿತು.

ತಾಲೂಕಿನ ಮಗ್ಗೆ ಗ್ರಾಮ ಪಂಚಾಯಿತಿಗೆ ಸೇರಿದ ವೈ.ಎನ್.ಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಜನವರಿ 18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಮಹಾರಥೋತ್ಸವ ಸಂಪನ್ನಗೊಂಡಿತು. ಗುರುವಾರ ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹೋಮ-ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು.

ಶ್ರೀ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಛತ್ರಿ-ಚಾಮರಗಳ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನು ತಂದು ರಥದಲ್ಲಿ ಕೂರಿಸಲಾಯಿತು. ಗುರುವಾರ ಬೆಳಗ್ಗೆ 11.50 ರಿಂದ 12.55ಕ್ಕೆ ಸಲ್ಲುವ ಶುಭಮೇಶ ಲಗ್ನದಲ್ಲಿ ರಥೋತ್ಸವ ನೆರವೇರಿತು. ಸಾವಿರಾರು ಭಕ್ತಾದಿಗಳು ರಥಕಾಣಿಕೆ ನೀಡಿ ಪೂಜೆ-ಪುರಸ್ಕಾರ ನೆರವೇರಿಸಿದರು. ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಈ ಬಾರಿ ಅದ್ದೂರಿಯಾಗಿ ದೇವಿಯ ರಥೋತ್ಸವ ಜರಗಿತು.

ನೆರೆದಿದ್ದ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ದವಸ-ಧಾನ್ಯಗಳನ್ನು ಸಮರ್ಪಿಸುವ ಮೂಲಕ ಹರಕೆ ತೀರಿಸಿದರು. ವರ್ಷಪೂರ್ತಿ ಗರ್ಭಗುಡಿಯಲ್ಲೇ ಕೂತು ಭಕ್ತರಿಗೆ ದರ್ಶನ ನೀಡುವ ಅನ್ನಪೂರ್ಣೇಶ್ವರಿ ವರ್ಷಕ್ಕೊಮ್ಮೆ ರಥದಲ್ಲಿ ಕೂತು ಭಕ್ತರಿಂದಲೇ ತನ್ನ ರಥವನ್ನ ಎಳೆಸಿಕೊಂಡು ಸಂತಸ ಪಟ್ಟು ದರ್ಶನ ನೀಡುತ್ತಾಳೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.

ಗುರುವಾರ, ಪಷ್ಟ, ಶುದ್ಧ ಪೌರ್ಣಮಿ, ಬನದ ಹುಣ್ಣಿಮೆಯ ದಿನ ಮೃತ್ಯುಂಜಯ ಪ್ರರಸ್ಪರ ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ ನಡೆದವು. ಸಂಜೆ 4ಕ್ಕೆ ರಥ ಅವರೋಹಣ, ಸಂಜೆ 5ಕ್ಕೆ ಶ್ರೀ ರಾಖಾಂಬರಿ ದೇವಿಯವರಿಗೆ ಉಯ್ಯಲೋತ್ಸವ ರಾತ್ರಿ 8ಕ್ಕೆ ಶ್ರೀ ಶಾಖಾಂಬರಿ ದೇವಿಗೆ ಶಯನೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net