ಶಿರೋಳ ತೋಂಟದಾರ್ಯ ಮಠದ ರಥೋತ್ಸವ

30 SHIROL
Published on

ಶಿರೋಳ: ಗ್ರಾಮದ ತೋಂಟದಾರ್ಯ ಮಠದ ರಥೋತ್ಸವ ಮಂಗಳವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ಶಿರೋಳ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಲ್ಲಕ್ಕಿ ಉತ್ಸವ, ನಂದಿಕೋಲು ಸೇವೆ, ಕರಡಿ ಮಜಲು, ಡೊಳ್ಳಿನ ಮೇಳ ಹಾಗೂ ಹಲಗಿಯ ಸೇವೆಗಳು ರಥೋತ್ಸವದ ಮೆರುಗು ಹೆಚ್ಚಿಸಿದವು.
ಜಾತ್ರೆಯಲ್ಲಿ 20 ದಿನಗಳಿಂದ ಪ್ರಭಾಕರ ಉಳ್ಳಾಗಡ್ಡಿ ಅವರು ನಡೆಸಿಕೊಟ್ಟ ಯಡೆಯೂರು ಜಗದ್ಗುರು ಶ್ರೀ ತೋಂಟದಾರ್ಯ ಸಿದ್ಧಲಿಂಗೇಶ್ವರ ಶಿವಯೋಗಿಗಳ ಪ್ರವಚನ ಮಂಗಲವಾಯಿತು. ಬುಧವಾರ ರೊಟ್ಟಿ ಜಾತ್ರೆಯಲ್ಲಿ ಯೋಗಾಸನ ಸ್ಪರ್ಧೆ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಸಿ.ಸಿ. ಪಾಟೀಲ, ಅಶೋಕ ಪಟ್ಟಣ, ಮಾಜಿ ಶಾಸಕ ಬಿ.ಆರ್. ಯಾವಗಲ್ ಪಾಲ್ಗೊಳ್ಳಲಿದ್ದಾರೆ.
ಶಿರೋಳ: ಜಾತ್ರಾ ಮಹೋತ್ಸವ ಅಂಗವಾಗಿ ಗುರು ಬಸವ ಜನಕಲ್ಯಾಣ ಸಂಸ್ಥೆ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಆಶ್ರಯದಲ್ಲಿ ಮಿಶ್ರತಳಿ, ದೇಸಿ ತಳಿಗಳ ಆಕಳು ಮತ್ತು ಕರುಗಳ ಪ್ರದರ್ಶನ ಗಮನ ಸೆಳೆಯಿತು. ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಗದಗ ಡಂಬಳ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ, ರೈತರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಮಿಶ್ರ ತಳಿಯ ಆಕಳು ಬೇಕು. ಅದರ ಜತೆಗೆ ದೇಸಿ ತಳಿಯ ಹಸುಗಳ ಸಾಕಾಣಿಕೆ ಮಾಡಬೇಕು ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net