ಅಳ್ನಾವರದಲ್ಲಿ ಗ್ರಾಮದೇವಿಯರ ರಥೋತ್ಸವ

16 Aln 1
Published on

ಅಳ್ನಾವರ: ಹನ್ನೆರಡು ವರ್ಷಗಳ ನಂತರ ಇಲ್ಲಿನ ಗ್ರಾಮದೇವಿಯರಾದ ಶ್ರೀಲಕ್ಷ್ಮೀ ಹಾಗೂ ಶ್ರೀ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಏ. 18ರಿಂದ ಆರಂಭಗೊಂಡು ಏ. 28 ರವರೆಗೆ ಅದ್ದೂರಿಯಾಗಿ ನೆರವೇರಲಿದೆ.

ಮೂರು ತಿಂಗಳ ಹಿಂದೆ ವಾರ ಬಿಡುವ ಮೂಲಕ ದೇವಿಯರನ್ನು ಬಣ್ಣಕ್ಕೆ ಬಿಟ್ಟು ಚಾಲನೆ ನೀಡಲಾಗಿದೆ. ಏಪ್ರಿಲ್ 9ರಂದು ಅಂಕಿ ಹಾಕಲಾಗಿದೆ. ನಂತರ 9 ದಿನಗಳ ನಂತರ ಏ. 18ರಿಂದ ಜಾತ್ರೆಯ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭಗೊಳ್ಳಲಿವೆ. 18ರಂದು ಬೆಳಗ್ಗೆ 4 ಗಂಟೆಗೆ ನಡೆಯುವ ದೇವಿಯರ ಮಾಂಗಲ್ಯಧಾರಣೆ ನೋಡಲು ಭಕ್ತ ಗಣ ಉತ್ಸುಕತೆಯಿಂದ ಕಾಯುತ್ತಿದೆ. ದೇವಿಯರ ನಜರ ತೆಗೆಯುವುದು, ಬಾಸಿಂಗ ಧಾರಣೆ, ಹಳದಿ ಹಚ್ಚುವ ಹಾಗೂ ಸೂರ್ಯೋದಯದ ಸಮಯದಲ್ಲಿ ಅಕ್ಷತಾರೋಹಣ ಕಾರ್ಯಕ್ರಮ ಕಣ್ತುಂಬಿಕೊಳ್ಳಲಿದ್ದಾರೆ. ನಂತರ ಹೋಮ ಹವನ ಕಾರ್ಯಗಳನ್ನು ಸುನೀಲ ಜೋಶಿ ನಡೆಸಿಕೊಡುವರು.

ಸಕಲ ಧಾರ್ವಿುಕ ವಿಧಿ ವಿಧಾನಗಳ ಮೂಲಕ ದೇವಿಯರನ್ನು ಪ್ರತಿಷ್ಠಾಪಿಸಿ ಧರ್ಮದರ್ಶಿಗಳು ದೇವಿಯರಿಗೆ ಉಡಿ ತುಂಬುವರು. 19ರಂದು ಸಾರ್ವಜನಿಕರಿಂದ ದೇವಿಯರಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ. 20ರಿಂದ 22 ರವರೆಗೆ ದೇವಿಯರ ಹೊನ್ನಾಟ ನಡೆಯಲಿದೆ. 23ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡುವರು. ಮಂಜುನಾಥ ಭಾರತಿ ಸ್ವಾಮೀಜಿ, ಪೀರಯೋಗಿ ಮೋಹನನಾಥಜೀ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಸಂತೋಷ ಲಾಡ್, ಧರ್ಮದರ್ಶಿ ಬಿ.ಎ. ಪಾಟೀಲ, ಜಾತ್ರಾ ಸಮಿತಿ ಉಪಾಧ್ಯಕ್ಷ ಎಂ.ಎಂ. ಗುಂಡಕಲ್ ಹಾಗೂ ಪ್ರಮುಖರು ಭಾಗಿಯಾಗಲಿದ್ದಾರೆ.

ರಥೋತ್ಸವ ಬಳಿಕ ಸಂಜೆ ದೇವಿಯರನ್ನು ಪಾದಗಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗುವುದು. 28ರವರೆಗೆ ದೇವಿಯರು ಪಾದಗಟ್ಟೆಯ ಸ್ಥಳದಲ್ಲಿ ದರ್ಶನ ನೀಡುವರು ಎಂದು ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net