

ಅಮೀನಗಡ: ಸಮೀಪದ ಬೇವಿನಮಟ್ಟಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ಸೋಮವಾರ ಸಂಜೆ ಸಂಭ್ರಮದಿಂದ ರಥೋತ್ಸವ ನಡೆಯಿತು.
ಬೆಳಗ್ಗೆಯಿಂದಲೇ ಬಸವೇಶ್ವರ ಉದ್ಭವ ಮೂರ್ತಿಗೆ ಮಹಾರುದ್ರಾಭಿಷೇಕ ನಂತರ ಕಲಶೋತ್ಸವ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು.
ರಥೋತ್ಸವ ವೇಳೆ ಭಕ್ತರು ಘೋಷಣೆಯೊಂದಿಗೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿದರು.
ಮನೆ ಮಾಳಿಗೆ, ಕಟ್ಟೆ ಮೇಲೆ ಜನತೆ ನಿಂತು ರಥೋತ್ಸವ ಕಣ್ತುಂಬಿಕೊಂಡರು.
ಹೂ ಮಾಲೆಗಳಿಂದ ವಿಶೇಷವಾಗಿ ರಥ ಶೃಂಗಾರಗೊಳಿಸಲಾಗಿತ್ತು.
ರಥೋತ್ಸವಕ್ಕೂ ಮುನ್ನ ಕಲಶವನ್ನು ವಾದ್ಯ ಮೇಳ, ಮಂತ್ರ ಘೋಷಣೆಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಮಾರ್ಗ ಮಧ್ಯೆ ಅನೇಕ ಕಡೆ ಮಹಿಳೆಯರಾದಿಯಾಗಿ ಎಲ್ಲರೂ ಪೂಜೆ ಸಲ್ಲಿಸಿ ಹಾರ ಅರ್ಪಿಸಿದರು.
ಕಲಶಾರೋಹಣದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ವಿವಿಧ ಗ್ರಾಮ, ಪಟ್ಟಣ ಪ್ರದೇಶದಿಂದ ಆಗಮಿಸಿದ ಭಕ್ತರು ದೇವರ ಆಶೀರ್ವಾದ ಪಡೆದುಕೊಂಡರು.