ಸಂಭ್ರಮದ ರಥೋತ್ಸವ

2 vikram 7A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರಾವಣ ಮಾಸ ನಿಮಿತ್ತ ಇಲ್ಲಿನ ಯು.ಬಿ. ಹಿಲ್​ನ ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ ಸೋಮವಾರ ಸಂಜೆ ಭಕ್ತರ ಹರ್ಷೋದ್ಘಾರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಸಂಜೆ 4.15ಕ್ಕೆ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಲ್ಲಿಂದ ಹೊರಟ ರಥ, ಹಿಂದಿ ಪ್ರಚಾರ ಸಭಾ ವೃತ್ತದವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು. ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಭಕ್ತರು "ಹರ ಹರ ಮಹಾದೇವ…' ಜೈಕಾರ ಹಾಕುವ ಮೂಲಕ ರಥಕ್ಕೆ ಉತ್ತತ್ತಿ ಸಮರ್ಪಿಸಿ ಕೃತಾರ್ಥರಾದರು.
ರಥೋತ್ಸವದಲ್ಲಿ ಜಾಂಝ್​, ಭಜನೆ, ಹೆಜ್ಜೆಮೇಳ, ಕರಡಿಮಜಲು, ಭಜನಾ ಮಂಡಳಿ ಸೇರಿ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಿದವು. ಬೆಳಗ್ಗೆ ಉಳವಿ ಚನ್ನಬಸವೇಶ್ವರ ಹಾಗೂ ವೀರಭದ್ರೇಶ್ವರರಿಗೆ ಮಹಾರುದ್ರಾಭಿಷೇಕ, ವಚನ ಪಠಣ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಕುಟುಂಬ ಸಮೇತ ಆಗಮಿಸಿದ್ದ ಜನರು ದೇವರ ದರ್ಶನ ಪಡೆದು ಪ್ರಸಾದ ಸೇವಿಸಿದರು.
ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್​ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್​.ಆರ್​. ರಾಮನಗೌಡರ, ಕಾಯಾಧ್ಯಕ್ಷ ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಆರ್​.ವೈ. ಸುಳ್ಳದ, ಧರ್ಮದರ್ಶಿಗಳಾದ ಟಿ.ಎಸ್​. ಪಾಟೀಲ, ಬಸವರಾಜ ಸೂರಗೊಂಡ, ಜಿ.ಬಿ. ಅಳಗವಾಡಿ, ಎನ್​. ಬಿ. ಗೋಲಣ್ಣವರ, ಸುರೇಶ ಹೆಗ್ಗೇರಿ, ಸುರೇಶ ಪಟ್ಟಣಶೆಟ್ಟಿ, ಶಂಕರ ಪಾಗದ, ಜಿ.ಐ. ವಾಣಿ, ವಿಜಯೇಂದ್ರ ಪಾಟೀಲ, ರಾಜು ಕೋಟಿ, ಜಿ.ಟಿ.ಶಿರೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net