

ಬಾದಾಮಿ: ಪಟ್ಟಣದ ಶ್ರೀ ರಾಯರ ಮಠದಲ್ಲಿ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಭಕ್ತಿ ಭಾವದೊಂದಿಗೆ ಮಹಾ ರಥೋತ್ಸವ ನಡೆಯಿತು.
ಶ್ರೀ ಪ್ರಹ್ಲಾದ್ ರಾಯರ ಹೊತ್ತ ರಥವು ಭಕ್ತಾದಿಗಳ ಸ್ವಸ್ತಿವಾಚನಾದಿಗಳು, ವಾಣಿ ಭಜನಾ ಮಂಡಳಿ ಭಜನೆ ಮೂಲಕ ಮಠದ ಆವರಣದಲ್ಲಿ ಪ್ರದಕ್ಷಿಣೆ ಹಾಕಿ ವೃಂದಾವನದ ಗರ್ಭ ಗುಡಿಗೆ ಬಂದು ತಲುಪಿ ಸಂಪನ್ನಗೊಂಡಿತು.
ಪೂರ್ವಾರಾಧನೆ ನಿಮಿತ್ತ ಪಲ್ಲಕ್ಕಿ ಉತ್ಸವ, ಗ್ರಾಮ ಪ್ರದಕ್ಷಿಣೆ, ಮಧ್ಯಾರಾಧನೆಯಂದು ವಿಶೇಷ ಅಲಂಕಾರ ಪೂಜೆ, ಉತ್ತರಾರಾಧನೆ ಮಹಾರಥೋತ್ಸವ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅರ್ಚಕರಾದ ಜಯತೀರ್ಥ ಇನಾಮದಾರ ಹಾಗೂ ಗುರುರಾಜ ಪುರೋಹಿತ ನೇತೃತ್ವ ವಹಿಸಿದ್ದರು.
ನಿತ್ಯ ರಾಯರ ವೃಂದಾವನಕ್ಕೆ ಪಂಚಾಮೃತ, ಅಷ್ಟೋತ್ತರ, ಮಹಾಪೂಜೆ, ಸರ್ವಸೇವಾ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ, ಸಂಜೆ ವಾಣಿ ಭಜನಾ ಮಂಡಳಿಯಿಂದ ಭಜನೆ, ಉಪನ್ಯಾಸ ಹಾಗೂ ಸ್ವಸ್ಥಿವಾಚನಾದಿಗಳು ನಡೆದವು. ಆ.23 ರಂದು ಸತ್ಯನಾರಾಯಣ ಪ್ರಜೆ, ಪವಮಾನ ಹೋಮ ನಡೆಯಲಿದೆ.
ಅಧ್ಯಕ್ಷ ಕೆ.ವಿ. ಕೆರೂರ, ವಿಜಯೀಂದ್ರ ಇನಾಮದಾರ, ಪಿ.ಪಿ. ಕಾರಕೂನ, ಎಸ್.ಜಿ. ಕುಲಕರ್ಣಿ, ಪ್ರಸನ್ನ ಮುಗಳಿ, ಜಯತೀರ್ಥ ಇನಾಮದಾರ, ಡಾ.ವಿ.ವೈ. ಭಾಗವತ, ಪ್ರಹ್ಲಾದ್ ಇನಾಮದಾರ, ಜಯಪ್ರಕಾಶ ಕುಲಕರ್ಣಿ, ಅಡಿವೇಂದ್ರ ಇನಾಮದಾರ, ಆರ್.ಕೆ. ದೇಶಪಾಂಡೆ, ಹನುಮಂತ ಕೆರೂರ ಇತರರಿದ್ದರು.