

ಗುಡೂರ ಎಸ್.ಸಿ: ಶ್ರಾವಣ ಮಾಸದ ಕೊನೆಯ ಸೋಮವಾರದಂದು ಇಲ್ಲಿನ ಪ್ಯಾಟಿ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಸಂಜೆ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಸಂಭ್ರಮದಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬಸವೇಶ್ವರ ಸ್ವಾಮಿಗೆ ಕುಂಭಾಭಿಷೇಕ, ವಿಶೇಷ ಪೂಜೆ, ಅಭಿಷೇಕ ಜರುಗಿದವು. ಭಕ್ತರು ತೆಂಗಿನಕಾಯಿ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ರಥದ ಕಳಸವನ್ನು ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಬಸವೇಶ್ವರ ದೇವಾಲಯದ ಹತ್ತಿರ ತರಲಾಯಿತು. ಕಳಶ ಆಗಮಿಸುತ್ತಿದ್ದಂತೆ ಭಕ್ತರು ದಾರಿಯುದ್ದಕ್ಕೂ ನೀರು ಹಾಕುತ್ತಾ ಕಳಶಕ್ಕೆ ಹೂಮಾಲೆ ಸಮರ್ಪಿಸಿದರು.
ಸಂಜೆ ವೇಳೆಯಲ್ಲಿ ಕಳಸವನ್ನು ವಾದ್ಯ ಮೇಳ, ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ ಮೂಲಕ ರಥದ ಹತ್ತಿರ ತರಲಾಯಿತು. ಭಕ್ತರೆಲ್ಲರು ಕಳಶದ ಪೂಜೆ ಸಲ್ಲಿಸಿದರು. ರಥವನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು., ರಥೋತ್ಸವ ಜರುಗುವಾಗ ಭಕ್ತರ ಘೋಷಣೆ , ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ರಥಕ್ಕೆ ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು.
ಮೈಸೂರಿನ ಮನ್ಮಹಾರಾಜನಿರಂಜನ ಜಗದ್ಗುರು ವಿಜಯ ಮಹಾಂತ ಸ್ವಾಮಿಗಳ ಕುದರಿಮೋತಿ ಹಾಗೂ ಗುಳೇದಗುಡ್ಡ ಒಪ್ಪತ್ತೇಶ್ವರ ಸಂಸ್ಥಾನಮಠ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಪವಿತ್ರ ಲಿಂಗ ಹಸ್ತದಿಂದ ಪ್ಯಾಟಿ ಬಸವೇಶ್ವರ ದೇವಾಲಯದ ರಥೋತ್ಸವಕ್ಕೆ ಚಾಲನೆ ನೀಡಿದರು. ಯುವಕರು ಭಕ್ತರು ಬಸವೇಶ್ವರ ಸ್ವಾಮಿಗೆ ಜಯ ಘೋಷಣೆ ಹಾಕುತ ರಥ ಎಳೆಯುವ ಮೂಲಕ ತಮ್ಮ ಭಕ್ತಿ ಮೆರೆದರು.
ರಥೋತ್ಸವವು ಪ್ಯಾಟಿ ಬಸವೇಶ್ವರ ದೇವಾಲಯದಿಂದ ಹೊರಟು ಮುಖ್ಯ ರಸ್ತೆ ತರಕಾತಿ ಮಾರುಕಟ್ಟೆ, ವಿಜಯ ಮಹಾಂತೇಶ ಬ್ಯಾಂಕ್ ಮಾರ್ಗವಾಗಿ ಪಾದಗಟ್ಟಿ ತಲುಪಿ ಅದೇ ಮಾರ್ಗವಾಗಿ ದೇವಾಲಯದ ಆವರಣದ ಮುಂಭಾಗ ಬಂದು ತಲುಪಿತು. ಇನ್ನು ರಥೋತ್ಸವದ ನಿಮಿತ್ತ ಬೆಳಗಿನ ಜಾವ ಕಳಸದ ಮೆರವಣಿಗೆ ಸಾಗಿತು. ಪೂಜಾರಿ ಮನೆತನದಿಂದ ಪ್ರಾರಂಭಗೊಂಡ ಮೆರವಣಿಗೆ ಕೋಳಿಯವರ ಸಂದಿ., ಲಕ್ಷ್ಮೀ ದೇವಾಲಯ, ಹುಂಚಿಕಟ್ಟಿ, ಕಾಯಿಪಲ್ಯ ಮಾರುಕಟ್ಟೆ, ವಿಜಯ ಮಹಾಂತೇಶ ಬ್ಯಾಂಜ್, ಮುಖ್ಯ ರಸ್ತೆಯ ಮಾರ್ಗವಾಗಿ ಪ್ಯಾಟಿ ಬಸವೇಶ್ವರ ದೇವಾಲಯ ತಲುಪಿತು.