

ಕುಶಾಲನಗರ:
ತಾಲೂಕಿನ ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವರ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿ ಮತ್ತು ವಿಶೇಷ ಹೋಮ ಹವನಗಳ ನಡುವೆ ಸೋಮವಾರ ನಡೆಯಿತು. ಶ್ರೀ ಉಮಾಮಹೇಶ್ವರ ಸ್ವಾಮಿಗೆ ಬೆಳಗ್ಗೆ 8 ಗಂಟೆಯಿAದ 10 ಗಂಟೆಯವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ನಂತರ ಮಧ್ಯಾಹ್ನ 12 ಗಂಟೆಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯ ವಿಗ್ರಹವನ್ನು ಹೂವಿನಿಂದ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ಭಕ್ತರ ಜಯ ಘೋಷಗಳ ನಡುವೆ ಎಳೆಯಲಾಯಿತು.
ರಥದ ಮುಂಭಾಗದಲ್ಲಿ ಉದ್ದರೂವಿನ ಶ್ರೀ ವೀರಗಾಸೆ ಕಲಾ ತಂಡದ ವತಿಯಿಂದ ವೀರಗಾಸೆ ಕುಣಿತ, ನೀಲವಾಗಿಲು ಗಣೇಶ್ ತಂಡದವರಿAದ ಮಂಗಳ ವಾದ್ಯಗಳನ್ನು ನುಡಿಸಲಾಗುತ್ತಿತು. ರಥೋತ್ಸವಕ್ಕೆ ಶಿರಂಗಾಲ, ಮೂಡಲ ಕೊಪ್ಪಲು, ನಲ್ಲೂರು, ಸಾಲುಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ರಥವು ಗ್ರಾಮದ ಮಾರುಕಟ್ಟೆ ಆವರಣದಿಂದ ವಾಪಸ್ ದೇವಸ್ಥಾನ ಆವರಣಕ್ಕೆ ತಲುಪಿದ ನಂತರ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಎಸ್. ಜೆ. ಉಮೇಶ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಕಟ್ಟಡ ಸಮಿತಿ ಗೌರವ ಅಧ್ಯಕ್ಷ ಎಸ್. ಆರ್. ಕಾಳಿಂಗಪ್ಪ, ಅಧ್ಯಕ್ಷ ಎಸ್. ಕೆ. ಪ್ರಸನ್ನ, ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ, ಸಮಿತಿಯ ಸದಸ್ಯರಾದ ಎಸ್.ಎ. ಶ್ರೀನಿವಾಸ್, ಸಿ.ಎನ್. ಲೋಕೇಶ್, ಎಸ್.ಪಿ. ಚೇತನ್, ಎಸ್.ಎ. ಧನೇಂದ್ರಕುಮಾರ್ ಮತ್ತಿತರರು ಈ ಸಂದರ್ಭ ಇದ್ದರು.