ವಿಜೃಂಭಣೆಯ ಶ್ರೀ ಗಣಪತಿ ರಥೋತ್ಸವ

rathotsava
Published on

ಕುಶಾಲನಗರ:

ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯ ಜತೆಗೆ ವಿಜೃಂಭಣೆಯಿAದ ನಡೆಯಿತು. ರಥೋತ್ಸವ ಹಿನ್ನೆಲೆಯಲ್ಲಿ ಮಧ್ಯಾಹ್ನ 11.30ರ ಸುಮಾರಿಗೆ ರಥಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳ ಜತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳೊಂದಿಗೆ ರಥದಲ್ಲಿ ಕುಳ್ಳರಿಸಲಾಯಿತು. ಇದೇ ವೇಳೆ ನೂರಕ್ಕೂ ಅಧಿಕ ಸಂಖ್ಯೆಯಲಿದ್ದ ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯುದ್ದಕ್ಕೂ ಕರ್ಪೂರ ಹರಡಿ ಬೆಂಕಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಧಾರಿಗಳ ಲಯಬದ್ಧ ಭಜನೆ ಈ ಸಂದರ್ಭದಲ್ಲಿ ಗಮನ ಸೆಳೆಯಿತು. ಮತ್ತೊಂದು ಕಡೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥದ ಮುಂದೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಅರ್ಚಕರು ತಾಳ್ಮೆಯಿಂದಲೇ ಭಕ್ತರು ತಂದಿದ್ದ ಹಣ್ಣುಕಾಯಿ ಸ್ವೀಕರಿಸಿ, ದೇವರಿಗೆ ಸಮರ್ಪಿಸಿ ಭಕ್ತರಿಗೆ ಹಿಂತಿರುಗಿಸುತ್ತಿದ್ದ ದೃಶ್ಯ ಕಂಡುಬAತು.

ಮಧ್ಯಾಹ್ನ 1.20ರ ಸುಮಾರಿಗೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ್ದ ಭಕ್ತರು ಗಣಪತಿಗೆ ಜಯಘೋಷ ಮೊಳಗಿಸುತ್ತಾ ಉತ್ಸಾಹದಿಂದ ರಥ ಎಳೆದು ಪುನೀತರಾದರು. ಹರಕೆ ಹೊತ್ತಿದ್ದ ಭಕ್ತರು ರಥ ಆಗಮಿಸುವ ವೇಳೆ ರಥಬೀದಿಯ ಮಾರ್ಗದಲ್ಲಿ ಸಾವಿರಾರು ಈಡುಕಾಯಿ ಒಡೆದು ಭಕ್ತಿ ಪ್ರದರ್ಶಿಸಿದರು.

ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ, ಪೈಪೋಟಿಗೆ ಬಿದ್ದಂತೆ ರಥಕ್ಕೆ ಜವನ ಎಸೆಯುವ ದೃಶ್ಯ ಸಾಮಾನ್ಯವಾಗಿತ್ತು. ಗಣಪತಿ ದೇವಾಲಯದ ಎದುರಿನ ಫೀಲ್ಡ್ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಥಬೀದಿಗಾಗಿ ಆಂಜನೇಯ ದೇವಾಲಯದ ತನಕ ರಥವನ್ನು ಎಳೆದುಕೊಂಡು ಸಾಗಲಾಯಿತು. ಇದಕ್ಕೂ ಮೊದಲು ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ಹಾಗೂ ರಥ ಬಲಿ ಕಾರ್ಯಕ್ರಮಗಳು ನಡೆದವು.

ದೇವಾಲಯದ ಪ್ರಧಾನ ಅರ್ಚಕÀ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ಪೂಜಾ ವಿದಿ ವಿಧಾನಗಳು ನಡೆದವು. ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡ ಪಾಲ್ಗೊಂಡಿತ್ತು. ರಥೋತ್ಸವ ಸಂದರ್ಭ ಶ್ರೀ ಗಣಪತಿ ದೇವಾಲಯಕ್ಕೆ ಆಗಮಿಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ಥ್ ಕಲ್ಪಿಸಲಾಗಿತ್ತು. ದೇವಾಲಯ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ. ಕೆ. ದಿನೇಶ್, ಉಪಾಧ್ಯಕ್ಷ ಆರ್. ಬಾಬು, ಗೌರವಾಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಬಿ. ಕೆ. ಮುತ್ತಣ್ಣ, ಖಜಾಂಚಿ ಎಸ್. ಕೆ. ಸತೀಶ್, ಸಹಕಾರ್ಯದರ್ಶಿ ಕೆ.ಎನ್. ದೇವರಾಜ್ ಸೇರಿ ಪ್ರಮುಖರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net