

ಕುಶಾಲನಗರ:
ಕುಶಾಲನಗರದ ಗ್ರಾಮ ದೇವತೆ ಶ್ರೀ ಗಣಪತಿಯ ರಥೋತ್ಸವ ನ.19ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ. ಈ ಬಾರಿ ನ. 15ರಿಂದಲೇ ರಥೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನ.25ರ ತನಕವೂ ಮುಂದುವರಿಯಲಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಗಿತವಾಗಿದ್ದ ಗೋಜಾತ್ರೆ ಈ ವರ್ಷದಿಂದ ಪುನಾರಂಭವಾಗಲಿದೆ. ಡಿ. 7,8 ಹಾಗೂ 9ರಂದು ಜಾತ್ರಾ ಮೈದಾನದಲ್ಲಿ ಗೋ ಜಾತ್ರೆ ಏರ್ಪಡಿಸಲಾಗಿದೆ. ಈ ಬಗ್ಗೆ ಈಗಾಗಲೇ ರೈತರ ಜತೆ ಚರ್ಚೆ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕುಶಾಲನಗರ, ಪಿರಿಯಾಪಟ್ಟಣ ತಾಲೂಕು ಹಾಗೂ ಸುತ್ತಮುತ್ತಲಿನ ರೈತರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಭಾಗಗಳಲ್ಲಿ ಜಾನುವಾರುಗಳಿಗೆ ಬಹುಮಾನವೂ ಇರಲಿದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ಗೋ ಜಾತ್ರೆ ಜತೆಗೆ ಇದೇ ಮೊದಲ ಬಾರಿಗೆ ಕೃಷಿ ಮೇಳವನ್ನೂ ಆಯೋಜಿಸಲಾಗಿದ್ದು, ಕೃಷಿಯಲ್ಲಿ ಆಧುನಿಕತೆಗೆ ಒತು ್ತನೀಡುವ ಸಲುವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಇಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಶನಿವಾರ ಸಂಜೆ ದೇವಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ ನ.15ರಂದು ಬೆಳಗ್ಗೆ 10.30ಕ್ಕೆ ಸತ್ಯನಾರಾಯಣ ಪೂಜೆಯೊಂದಿಗೆ ಜಾತ್ರೋತ್ಸವದ ವಿದಿ-ವಿಧಾನಗಳು ಆರಂಭವಾಗಲಿದೆ. ಅಂದು ಸಂಜೆ ದಟ್ಟೋತ್ಸವ, ರಂಗಪೂಜೆ ಏರ್ಪಡಿಸಲಾಗಿದೆ. ಈ ಬಾರಿ ವಿಶೇಷವಾಗಿ ಗೋಪೂಜೆ ನಂತರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು. ಕಾವೇರಿ ನದಿ ತೀರದಲ್ಲಿ ಅಷ್ಟಾವಧಾನ ಕಾರ್ಯಕ್ರಮ ನಡೆಸಲಾಗುವುದು. 3 ದಿನ ಫಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ. ಮೂಷಿಕ ವಾಹನ ಉತ್ಸವ, ಚಂದ್ರಬಿAಬೋತ್ಸವ, ವೃಷಭವಾಹನ ಸೇವೆ, ಅಶ್ವರೂಢ ವಾಹನ ಸೇವೆ, ಮಯೂರ ವಾಹನ ಸೇವೆ, ಗಜರೂಢ ಸೇವೆ, ತೆಪ್ಪೋತ್ಸವ ಸೇರಿದಂತೆ ದೇವರಿಗೆ ಛಾಯಾ ವಾಹನೋತ್ಸವ ನಡೆಸಲಾಗುವುದು. 1955ರ ತನಕ 3 ದಿನಗಳ ಕಾಲ ನಡೆಯುತ್ತಿದ್ದ ಜಾತ್ರೋತ್ಸವ 1958 ರಲ್ಲಿ 7 ದಿನ ಆಯಿತು ಈಗ 10 ದಿನಗಳ ತನಕ ಕಾರ್ಯಕ್ರಮಗಳು ನಡೆಯಲಿದೆ. ಕುಶಾಲನಗರದ ಈ ಜಾತ್ರೋತ್ಸವ ಮೈಸೂರು ದಸರಾ ಮಾದರಿಯಲ್ಲಿ ವಿಜೃಂಭಿಸಬೇಕು. ಹಾಗಾಗಿ ದೇವರು ಸಂಚರಿಸುವ ಮಾರ್ಗದಲ್ಲಿ ಅಂಗಡಿ, ಮುಂಗಟ್ಟುಗಳಿಗೆ ಸಂಬAಧಿಸಿದ ಅಂಗಡಿಯವರು ವಿದ್ಯುತ್ ದೀಪಾಲಂಕಾರ ಮಾಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ನ. 19ರಂದು ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಡಿ.1ರ ತನಕ 13 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ದಿನವೂ ಸಂಜೆ 7ರಿಂದ 10 ಗಂಟೆ ತನಕ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಸಿದ್ಧ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೂ ವೇದಿಕೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಿತಿ ಉಪಾಧ್ಯಕ್ಷ ಆರ್. ಬಾಬು, ಕಾರ್ಯದರ್ಶಿ ಮುತ್ತಣ್ಣ, ಖಜಾಂಚಿ ಎಸ್.ಕೆ. ಸತೀಶ್, ಸಹಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕ ಹೆಚ್.ಎಂ. ಚಂದ್ರು ಮತ್ತಿತರರು ಇದ್ದರು.