ದೇವತೆಗಳಿಗೆ ವಿಶೇಷ ಪೂಜೆ, ರಥೋತ್ಸವ

13 HRS 01
Published on

ಹಿರೀಸಾವೆ : ಕಡೇ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಪಟ್ಟಣದಲ್ಲಿ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆಯಿಂದಲೇ ದೇಗುಲದಲ್ಲಿ ದೇವತೆಗಳಿಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ನೆರವೇರಿದವು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಬಳಿಕ ಉತ್ಸವ ಮೂರ್ತಿಗಳನ್ನು ಒಡವೆ-ವಸ್ತ್ರಗಳಿಂದ ಅಲಂಕರಿಸಲಾಯಿತು. ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥ ಎಳೆಯಲಾಯಿತು.
ಜಾನಪದ ಕಲಾವಿದರಾದ ನಾಗಮಂಗಲದ ರುದ್ರೇಶ್ ತಂಡದವರಿಂದ ವೀರಭದ್ರನ ಕುಣಿತ ಹಾಗೂ ಭಕ್ತರ ಜಯಘೋಷಣೆಗಳೊಂದಿಗೆ ಮೆರವಣಿಗೆ ರಾಜಬೀದಿಯಲ್ಲಿ ಸಾಗಿತು.
ಗ್ರಾಮದ ಅಂಗಡಿ ಬೀದಿ, ಉಯ್ಯಲೆ ಕಂಬದ ಆವರಣ, ಸಿದ್ದಲಿಂಗೇಶ್ವರ ಬೀದಿಗಳಲ್ಲಿ ಉತ್ಸವವು ಸಾಗಿತು. ಕಾರ್ತಿಕ ಮಾಸದ ಪ್ರಾರಂಭದಿಂದ ಬಸವೇಶ್ವರ ದೇಗುಲದಲ್ಲಿ ಭಕ್ತರು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದು, ಕಡೇ ದಿನವಾದ ಮಂಗಳವಾರ ಸಂಜೆ ಸಿದ್ದಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಅನ್ನದಾಸೋಹ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net