ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ ಸಂಪನ್ನ ; ಗರುಡ ಪ್ರದಕ್ಷಿಣೆ ನಂತರ ಚಾಲನೆ

16Tmk_Shettihalli_Jatre_02
Published on

ತುಮಕೂರು: ಶೆಟ್ಟಿಹಳ್ಳಿಯ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವವು ಮಧ್ಯಾಹ್ನ 1 ರಿಂದ 1.15ರ ಅಭಿಜಿನ್ ಲಗ್ನದಲ್ಲಿ ನಡೆಯಿತು. ಇದಕ್ಕೂ ಮುನ್ನ ರಥದ ಮೇಲೆ ಗರುಡ ಮೂರು ಸುತ್ತು ಸುತ್ತಿದ ನಂತರ ಭಕ್ತರ ಜೈಕಾರದೊಂದಿಗೆ ತೇರು ಮುಂದಕ್ಕೆ ಸಾಗಿತು.

ಕಳೆದ ವರ್ಷದ ರಥೋತ್ಸವ ರದ್ದಾಗಿದ್ದ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ಮುನ್ನ ರಥೋತ್ಸವ ನೆರವೇರಿಸಬೇಕಿದ್ದರಿಂದ ಮಾ.17 ರಂದು ಹೆಚ್ಚು ಪ್ರಚಾರವಿಲ್ಲದೆ ಸ್ವಾಮಿ ರಥೋತ್ಸವ ಜರುಗಿತ್ತು. ಈಗ ಮತ್ತೊಮ್ಮೆ ಬ್ರಹ್ಮರಥೋತ್ಸವ ನೆರವೇರಿದ್ದು, ಮೇಯರ್ ಬಿ.ಜಿ.ಕೃಷ್ಣಪ್ಪ, ಪ್ರಧಾನ ಅರ್ಚಕ ಅಜಿತ್ ಕುಮಾರ್, ಪ್ರಧಾನ ಆಗಮಿಕ ನರಸಿಂಹ ಭಟ್ ಸೇರಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ರಥದ ತುದಿಯ ಕಳಸಕ್ಕೆ ದವನ: ಬಾಳೆಹಣ್ಣು ಎಸೆಯಲು ಭಕ್ತರು ಪೈಪೋಟಿಯಿಂದ ಪ್ರಯತ್ನಿಸುತ್ತಿದ್ದುದು ಆಕರ್ಷಕವಾಗಿತ್ತು. ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತರು ಉರುಳು ಸೇವೆ ಮೂಲಕ ಹರಕೆ ತೀರಿಸಿದರು. ಉತ್ಸವದ ವೇಳೆ ಬೊಂಬೆ ಕುಣಿತ ಎಲ್ಲರ ಮನಸೆಳೆಯಿತು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸಿ ವಿ.ಅಜಯ್ ಬೆಳಗ್ಗೆಯೇ ಸ್ವಾಮಿಯ ದರ್ಶನ ಪಡೆದರು.

ಸಂಜೆ ಸ್ವಾಮಿಗೆ ದೇವಸ್ಥಾನದ ಆವರಣದಲ್ಲೇ ಧೂಳೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಬಿಗಿಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಚಿಕ್ಕತೊಟ್ಲುಕರೆಯಲ್ಲಿ ರಥೋತ್ಸವ: ತಾಲೂಕಿನ ಕೋರ ಹೋಬಳಿ ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಅಟವೀ ಜಂಗಮ ಸುಕ್ಷೇತ್ರಾಧ್ಯಕ್ಷ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ದವನ-ಬಾಳೆಹಣ್ಣನ್ನು ತೇರಿಗೆ ಬೀರಿ ಭಕ್ತಿ ಸಮರ್ಪಿಸಿದರು.

ಜಿಪಂ ಮಾಜಿ ಸದಸ್ಯ ಲಕ್ಷ್ಮೀ ನರಸಯ್ಯ, ರಾಜಗೋಪಾಲ್, ಲಕ್ಷ್ಮೀ ನರಸಿಂಹೇಗೌಡ, ಲಕ್ಕಪ್ಪ,ರಾಮಣ್ಣ, ಹನುಮಂತರಾಯಪ್ಪ, ರಂಗಣ್ಣ , ತಾಪಂ ಮಾಜಿ ಸದಸ್ಯ ಸಿದ್ದಪ್ಪ, ಓಂಕಾರ್ ಪ್ರಮುಖರು ಉಪಸ್ಥಿತರಿದ್ದರು.

ರಸ್ತೆಯುದ್ದಕ್ಕೂ ಪ್ರಸಾದ, ಪಾನಕ ! ಬಿಸಿಲಿನಲ್ಲೂ ಸ್ವಾಮಿಯ ದರ್ಶನಕ್ಕೆ ಹರಿದುಬಂದಿದ್ದ ಜನಸಾಗರಕ್ಕೆ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿನ ಅಂಗಡಿ ಮಳಿಗೆಗಳವರು ಹಾಗೂ ಹನುಮ ಭಕ್ತರು ಪಾನಕ, ಕೋಸಂಬರಿ, ಪುಳಿಯೋಗರೆ, ಮೊಸರನ್ನ ಇತ್ಯಾದಿ ಫಲಹಾರವನ್ನು ಪ್ರಸಾದದ ರೂಪದಲ್ಲಿ ವಿತರಿಸಿ ಸ್ವಾಮಿಗೆ ಅಳಿಲು ಸೇವೆ ಸಮರ್ಪಿಸಿದರು.

ಮತ್ತೊಮ್ಮೆ ರಥೋತ್ಸವ: ಕರೊನಾ ಕಾರ್ಮೋಡದಿಂದ 2020ರಲ್ಲಿ ಸ್ಥಗಿತಗೊಂಡಿದ್ದ ರಥೋತ್ಸವವನ್ನು ಫೆ.27, 2021ರಲ್ಲಿ ನೆರವೇರಿಸಲಾಗಿತ್ತು. ಅದೇ ವರ್ಷ ಯುಗಾದಿ ಬಳಿಕ ನಡೆಯಬೇಕಿದ್ದ ರಥೋತ್ಸವಕ್ಕೆ ಕರೊನಾ ಎರಡನೇ ಅಲೆ ತಡೆಯೊಡ್ಡಿತ್ತು. ಹಾಗಾಗಿ, ಯುಗಾದಿ ಹಬ್ಬಕ್ಕೆ ಮುನ್ನ ಈ ವರ್ಷ ಮಾರ್ಚ್ 17ಕ್ಕೆ ಶೆಟ್ಟಿಹಳ್ಳಿ ಆಂಜನೇಯ ರಥೋತ್ಸವ ನೆರವೇರಿಸಲಾಗಿತ್ತು. ಯುಗಾದಿ ಬಳಿಕ ಮತ್ತೊಮ್ಮೆ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net