

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆಯನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ.
ಹುಣ್ಣಿಮೆಯ ದಿನವಾದ ಶುಕ್ರವಾರ ರತಿ-ಕಾಮಣ್ಣರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಗರದ ಹಲವು ಕಡೆಗಳಲ್ಲಿ ಪೆಂಡಾಲ್ ಹಾಕಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ನಗರದ ಕಮರಿಪೇಟ, ಅಂಚಟಗೇರಿ ಓಣಿ, ಮ್ಯಾದಾರ ಓಣಿ, ಹಳೇಹುಬ್ಬಳ್ಳಿ, ಚನ್ನಪೇಟ, ವಿದ್ಯಾನಗರ, ಕಿಲ್ಲಾ ಮುಂತಾದ ಕಡೆಗಳಲ್ಲಿ ಶುಕ್ರವಾರ ರತಿ - ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಇಲ್ಲಿಯ ಮ್ಯಾದಾರ ಓಣಿಯಲ್ಲಿ ಬೃಹತ್ ಬಿದಿರಿನ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಆಕರ್ಷಣೀಯವಾಗಿದೆ.
ರತಿ ಕಾಮಣ್ಣರ ಮೂರ್ತಿಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ತರಹೇವಾರಿ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು.
ಹುಬ್ಬಳ್ಳಿಯ ಕೆಲವು ಕಡೆಗಳಲ್ಲಿ ಗುರುವಾರವೇ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಶುಕ್ರವಾರ ಓಕುಳಿಯಾಟ ಆಡಲಾಯಿತು. ತಾಲೂಕಿನ ಅಮರಗೋಳದಲ್ಲಿ ಶುಕ್ರವಾರ ಕಾಮಣ್ಣನ ದಹನ ಮಾಡಿದ ನಂತರ ರಂಗಿನಾಟ ನಡೆಯಿತು.