ಬಂಜಾರ ಸಮಾಜದ ಜಾಗೃತಿಗೆ ರಥಯಾತ್ರೆ

dvd ramesh
ರಮೇಶ
Published on

ದೇವದುರ್ಗ: ಬಂಜಾರ ಸಮುದಾಯದ ಹಕ್ಕು, ಪ್ರಗತಿ ಹಾಗೂ ಪರಿವರ್ತನೆಗಾಗಿ ಬೀದರ್‌ನಿಂದ ಬೆಂಗಳೂರುವರೆಗೆ ಮಾ.4ರಿಂದ 10ವರೆಗೆ ಜನಜಾಗೃತಿ ಸೇವಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗೋರಸೇನಾ ಜಿಲ್ಲಾಧ್ಯಕ್ಷ ರಮೇಶ ರಠೋಡ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಲವು ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಜನ ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಗೆ ಗುಳೆ ಹೋಗುತ್ತಿದ್ದು, ಇದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗುಳೆ ಹೋಗದಂತೆ ಜನರಿಗೆ ಅರಿವು ಮೂಡಿಸಲಾಗುವುದು. ಸಮಾಜದ ಜನರು ಮೂಢನಂಬಿಕೆಗೆ ಒಳಗಾಗಿದ್ದು ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಸಮಾಜದಲ್ಲಿ ಬೇರೂರಿರುವ ವಧು ದಕ್ಷಿಣೆ (ದೇಜು) ಪದ್ಧತಿ ಕೈಬಿಡುವಂತೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಯಾವುದೇ ಆಸೆ, ಆಕಾಂಕ್ಷೆಗೆ ಮತಾಂತರವಾಗುತ್ತಿದ್ದು, ತಾಂಡಾ, ದೊಡ್ಡಿಗಳಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಬಂಜಾರ ಸಮಾಜದ ಸಂಘಟನೆ ಮಾಡುವುದು ಸೇವಾಯಾತ್ರೆಯ ಪ್ರಮುಖ ಅಜೆಂಡವಾಗಿದೆ ಎಂದರು.

ಮಾ.4ರಂದು ಬೀದರ್‌ನಲ್ಲಿ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದು, ಮಾ.5ರಂದು ಕಲಬುರಗಿ, ಮಾ.6ರಂದು ಯಾದಗಿರಿ, ಮಾ.7ರಂದು ತಿಂಥಣಿ ಬ್ರಿಡ್ಜ್‌ನಲ್ಲಿ ಜಿಲ್ಲೆಗೆ ಪ್ರವೇಶ ಮಾಡಲಿದ್ದು, ಅಂದು ಪಟ್ಟಣದ ವಿವಿಧ ಬಡಾವಣೆಯಲ್ಲಿ ರಥಯಾತ್ರೆಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುವುದು. ಸುಮಾರು 200 ವಾಹನಗಳು, ಎರಡು ಸಾವಿರ ಜನರು ಭಾಗವಹಿಸಲಿದ್ದಾರೆ. ಮಾ.10ರಂದು ಬೆಂಗಳೂರು ತಲುಪಲಿದ್ದು ಅಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು. ಮುಖಂಡರಾದ ನರೇಶ ಯಾದವ್, ಕುಮಾರ ರಾಠೋಡ್, ಬೂದೆಪ್ಪ ರಾಠೋಡ್, ಬಾಷಾ ನಾಯ್ಕ ರಾಠೋಡ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net