

ಕುಶಾಲನಗರ: ಕರ್ನಾಟಕ ಜೋತಿ ರಥಯಾತ್ರೆಯು ಬುಧವಾರ ಕುಶಾಲನಗರ ತಾಲೂಕು ಪ್ರವೇಶ ಮಾಡುತ್ತಿರುವುದು ಸಂತೋಷದ ವಿಚಾರ. ರಥಕ್ಕೆ ಸಲ್ಲಬೇಕಾದ ಗೌರವದಲ್ಲಿ ಯಾವುದೇ ಧಕ್ಕೆ ಆಗಬಾರದು ಎಂದು ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದರು.
ಕುಶಾಲನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಆಗಿರುವ ಕಾರಣ ಸರ್ಕಾರ ರಾಜ್ಯಾದ್ಯಂತ ಈ ರಥದ ಮೂಲಕ ಜಾಗೃತಿ ಮೂಡಿಸಲಾತ್ತಿದೆ. ಈ ರಥ ಕುಶಾಲನಗರಕ್ಕೆ ಬರುವ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಥಯಾತ್ರೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದಿಂದ ಹೊರಟು, ಕಾರ್ಯಪ್ಪ ವೃತ್ತದ ಮೂಲಕ ರಥ ಬೀದಿಯಲ್ಲಿ ಸಾಗಿ ಸೋಮೇಶ್ವರ ದೇವಸ್ಥಾನದ ಬಳಿ ರಥಕ್ಕೆ ಬೀಳ್ಕೊಡುಗೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸೋಮವಾರಪೇಟೆ ತಾಪಂ ಇಒ ಪರಮೇಶ್ ಕುಮಾರ್, ಕುಶಾಲನಗರ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸತೀಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ನಾಗೇಶ್, ಪುರಸಭೆ ಮುಖ್ಯಧಿಕಾರಿ ಕೃಷ್ಣಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪಾ, ಪುರಸಭೆಯ ಆರೋಗ್ಯ ನಿರೀಕ್ಷಕ ಉದಯ್, ಆರ್‌ಐ ಸಂತೋಷ್, ವಿಎ ಗೌತಮ್ ಇತರರು ಭಾಗವಹಿಸಿದ್ದರು.