

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಿವಿಧ ಯೋಗ ಸಂಸ್ಥೆಗಳಿಂದ 108 ಸಾಮೂಹಿಕ ಸೂರ್ಯ ನಮಸ್ಕಾರ, ಅಗ್ನಿಹೋತ್ರ, ಸೂರ್ಯ ಗಾಯತ್ರಿ ಮಂತ್ರ ಜಪ, ಶಾಲಾ ವಿದ್ಯಾರ್ಥಿಗಳಿಂದ ಓಂಕಾರ ಯೋಗದೊಂದಿಗೆ ಭಾಸ್ಕರನನ್ನು ಪ್ರಾರ್ಥಿಸುವ ಮೂಲಕ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಥಸಪ್ತಮಿ ಆಚರಿಸಲಾಯಿತು.
ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನವಾಗಿ ಏಳು ಅಶ್ವಗಳು ಎಳೆಯುವ ರಥವನ್ನೇರಿ ಏಳು ಲೋಕಗಳ ಸಂಚಾರಕ್ಕೆ ಹೊರಟ ದಿನದಂದು ರಥಸಪ್ತಮಿ ಆಚರಿಸಲಾಗುತ್ತದೆ. ಈ ಪ್ರತೀತಿಯಂತೆ ಯೋಗಾಭ್ಯಾಸಿಗಳು ಮನೆಗಳಲ್ಲಿ 7 ಎಕ್ಕದೆಲೆಯೊಂದಿಗೆ ಶುಚಿರ್ಭೂತರಾಗಿ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದರು.
ನಗರದ ವಿವಿಧ ದೇವಾಲಯ, ಯೋಗಮಂದಿರ, ಸಭಾಂಗಣಗಳಲ್ಲಿ ನೂರಾರು ಜನ ಪಾಲ್ಗೊಂಡು ಭಾರತಮಾತೆ, ಸ್ವಾಮಿ ವಿವೇಕಾನಂದ, ಓಂಕಾರ ಚಿತ್ರಗಳಿಗೆ ಮುಂಜಾನೆ ಪುಷ್ಪಾರ್ಪಣೆ ಮಾಡಿದರು. ನಂತರ ಕ್ರಿಯಾತ್ಮಕ ಆಸನಗಳೊಂದಿಗೆ ಆರಂಭವಾಗಿ 108 ಸೂರ್ಯ ನಮಸ್ಕಾರ ಮಾಡಲಾಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ:
ನಗರದ ಎಂಇಎಸ್ ಶಾಖೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಸೂರ್ಯ ನಮಸ್ಕಾರ ಮಾಡಿದರು. ಬೈಪಾಸ್ ರಸ್ತೆ ಯೋಗ ಮಂದಿರದಲ್ಲಿ 108 ಅಗ್ನಿಹೋತ್ರ ಹಾಗೂ ಗಾಯತ್ರಿ ಮಂತ್ರ ಜಪ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಕೆಂಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಸಂಚಾಲಕಿ ಪುಷ್ಪಾ ಮೋಹನ್ ಹಾಗೂ ಶಿಕ್ಷಕಿ ಲಲಿತಾ ಮಕ್ಕಳೊಂದಿಗೆ ಸೂರ್ಯ ನಮಸ್ಕಾರ ಮಾಡಿದರು.
ಜಿಲ್ಲಾ ಸಂಚಾಲಕ ಗೌತಮ್‍ಪ್ರಭು, ವಲಯ ಸಂಚಾಲಕಿ ಸುಮಿತ್ರಾ ನಾಗಪ್ಪ ಗೌಡ, ವರದರಾಜು, ಶಾರದಾ, ಶೇಷಾದ್ರಿ, ಮಂಜುನಾಥ್, ರುದ್ರಪ್ಪ, ಶಿವಕುಮಾರ್, ಮಹೇಶ್, ಗೀತಾ, ರತ್ನಾ, ರವಿ, ಶ್ರೀನಿವಾಸ್ ಇತರರಿದ್ದರು.
ಮೂರು ಹೊತ್ತು ನಮಸ್ಕಾರ:
ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಭಾರತ್ ಸ್ವಾಭಿಮಾನ್ ಪತಂಜಲಿ ಯೋಗ ಸಂಸ್ಥೆ, ಯುವಭಾರತ, ಕಿಸಾನ್ ಸೇವಾ ಸಮಿತಿ ಸಂಘಟನೆಗಳ ನೂರಾರು ಜನ ಬೆಳಗ್ಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಬಾರಿ 108 ಸೂರ್ಯ ನಮಸ್ಕಾರ ಮಾಡಿದರು.
ಸಹಸ್ರ ನಮಸ್ಕಾರದ ಪುಣ್ಯ:
ರಥಸಪ್ತಮಿಯಂದು ಸೂರ್ಯನಿಗೆ ಒಂದು ನಮಸ್ಕಾರ ಮಾಡಿದರೂ ಸಾವಿರ ನಮಸ್ಕಾರ ಮಾಡಿದಷ್ಟು ಪುಣ್ಯ ಎಂದು ಉಲ್ಲೇಖವಿದೆ. ಹಾಗಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಅಖಂಡ ಸೂರ್ಯ ನಮಸ್ಕಾರ ಮಾಡಲಾಗುತ್ತದೆ ಎಂದು ಹಿರಿಯರು ಹೇಳಿದರು.
ಮಹಿಳಾ ವಿಭಾಗದ ಜಿಲ್ಲಾ ಪ್ರಭಾರಿ ಸುಮಾ, ಸಹ ಪ್ರಭಾರಿ ಅನಿತಾ, ಪುರುಷರ ವಿಭಾಗದ ಜಿಲ್ಲಾ ಪ್ರಭಾರಿ ಜನಕರಾಜ್, ಕಿಸಾನ್ ಸೇವಾ ಪ್ರಭಾರಿ ನಾಗರಾಜ್, ಯುವ ಪ್ರಭಾರಿ ಪ್ರೀತೇಶ್ ಇದ್ದರು.
ದೇಶಭಕ್ತಿ ಗೀತೆ ಗಾಯನ:
ನಗರದ ಶಂಕರಪುರ, ಬಸವನಹಳ್ಳಿ, ಭುವನೇಂದ್ರ, ಏಕಲವ್ಯ, ಛತ್ರಪತಿ, ಹನುಮಾನ್ ಶಾಖೆ ಸೇರಿದಂತೆ ಜಿಲ್ಲೆಯ ಆರ್‍ಎಸ್‍ಎಸ್ ವಿವಿಧ ಶಾಖೆಗಳಲ್ಲಿ ರಥಸಪ್ತಮಿ ಅಂಗವಾಗಿ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜಿಸಲಾಗಿತ್ತು. ಬಾಲಕರು, ಯುವಕರು ಸೇರಿ ನೂರಾರು ಜನ ಪಾಲ್ಗೊಂಡಿದ್ದರು. ದೇಶ ಭಕ್ತಿಗೀತೆ ಹಾಡಲಾಯಿತು. ಜಿಲ್ಲಾ ಪ್ರಚಾರಕ ಅನಿಲ್, ಮುಖ್ಯಶಿಕ್ಷಕ ನವೀನ್, ಪ್ರಸಾದ್, ಮಂಜು ಇದ್ದರು.
ವಿದ್ಯಾರ್ಥಿಗಳಿಂದ ಓಂಕಾರಯೋಗ:
ತಾಲೂಕಿನ ಕದ್ರಿಮಿದ್ರಿ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು ಓಂಕಾರ ಆಕೃತಿಯಲ್ಲಿ ನಿಂತು ಸೂರ್ಯ ನಮಸ್ಕಾರ ಮಾಡಿದ ನಂತರ ಮಕ್ಕಳು ಕುಳಿತು ಸೂರ್ಯನನ್ನು ಪ್ರಾರ್ಥಿಸಿದರು. ಶಾಲಾ ಶಿಕ್ಷಕರು ಆಡಳಿತ ಮಂಡಳಿ ಪಾಲ್ಗೊಂಡು ಸೂರ್ಯನ ಮಹತ್ವ ತಿಳಿಸಿ ಸೂರ್ಯ ಗಾಯತ್ರಿ ಮಂತ್ರ ಬೋಧಿಸಿದರು. ಸಂಸ್ಥೆ ಕಾರ್ಯದರ್ಶಿ ಕೆ.ಸಿ.ಶಂಕರ್, ಪ್ರಾಚಾರ್ಯ ರಾಘವೇಂದ್ರ, ಪ್ರೀತೇಶ್, ದಿನಕರ್ ಇದ್ದರು.