ಜಿಲ್ಲಾದ್ಯಂತ ಸಾವರ್ಕರ್ ರಥಯಾತ್ರೆ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾಹಿತಿ

Tulasi-1
Published on

ಮಂಡ್ಯ: ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಾವರ್ಕರ್ ರಥಯಾತ್ರೆ ಬನ್ನೂರು ಕಡೆಯಿಂದ ಕಿರುಗಾವಲು ಮಾರ್ಗವಾಗಿ ಆ.27ರಂದು ಜಿಲ್ಲೆಯನ್ನು ಪ್ರವೇಶಿಸಿದೆ. ಅಂತೆಯೇ ಮೂರು ದಿನ ಸಂಚರಿಸಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾಹಿತಿ ನೀಡಿದರು.
ಮೊದಲ ದಿನ ಮಳವಳ್ಳಿ, ಹಲಗೂರು, ಕೆ.ಎಂ.ದೊಡ್ಡಿ, ಮದ್ದೂರು ಮಾರ್ಗವಾಗಿ ಬೆಸಗರಹಳ್ಳಿಯಲ್ಲಿ ಮುಕ್ತಾಯವಾಗಿದೆ. 28ರಂದು ಕೊಪ್ಪ ಮಾರ್ಗವಾಗಿ ಕೆರಗೋಡು ನಂತರದಲ್ಲಿ ಮಂಡ್ಯ ನಗರದಲ್ಲಿ ರಥಯಾತ್ರೆ ಸಾಗಿ ಮುಂದೆ ಶ್ರೀರಂಗಪಟ್ಟಣ ತಲುಪಿ ಬಳಿಕ ಪಾಂಡವಪುರ, ಜಕ್ಕನಹಳ್ಳಿ ಕ್ರಾಸ್, ನಾಗಮಂಗಲ ನಂತರ ಬೆಳ್ಳೂರು ತಲುಪಲಿದೆ. 29ರಂದು ರಥಯಾತ್ರೆ ಬೆಳ್ಳೂರಿನಿಂದ ಕಿಕ್ಕೇರಿ, ಕೆ.ಆರ್.ಪೇಟೆಯಲ್ಲಿ ಸಂಚರಿಸಿದ ಬಳಿಕ ಜಿಲ್ಲೆಯಿಂದ ನಿರ್ಗಮಿಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ವಾತಂತ್ರ್ಯ ಹೋರಾಟಕ್ಕಾಗಿ 27 ವರ್ಷ ಜೈಲುವಾಸ ಅನುಭವಿಸಿದ ವೀರ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ್ದನ್ನು ಹೇಳಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಇಂತಹ ಎಲ್ಲ ಕೃತ್ಯಗಳೂ ಜನತೆಗೆ ಒಂದೊಂದಾಗಿ ತಿಳಿಯುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ಹೇಳಿದರು. ಬಿಜೆಪಿ ನಗರಾಧ್ಯಕ್ಷ ವಿವೇಕ್, ವಿನೋಭ, ನಾಗಾನಂದ್, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net