ಫೆ.5ರಂದು ಶ್ರೀ ರಂಗನಾಥಸ್ವಾಮಿ ರಥಸಪ್ತಮಿ: ಶಾಸಕ ರಮೇಶ ಬಂಡಿಸಿದ್ದೇಗೌಡ ಮಾಹಿತಿ

Ratha Saptami Pre Meeting Mandya
Published on

ಮಂಡ್ಯ: ಶ್ರೀರಂಗನಾಥಸ್ವಾಮಿ ದೇವಾಲಯ ರಥಸಪ್ತಮಿ ಕಾರ್ಯಕ್ರಮವು ಫೆ.5ರಂದು ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಹ್ಮರಥ ಚಾಲನೆ ಮಾಡಲು ಯೋಗ್ಯವಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ಥಿ ಪಡಿಸಬೇಕು. ರಥ ಸಾಗುವ ರಸ್ತೆಗಳನ್ನು ಪರಿಶೀಲಿಸಿ ರಥ ಚಲಿಸುವ ಮಾರ್ಗದಲ್ಲಿ ಗುಂಡಿಗಳಿದ್ದಲ್ಲಿ ಸರಿಪಡಿಸಿ. ರಥ ಚಲಿಸುವ ರಸ್ತೆಯ ಎರಡು ಬದಿ ಬೆಳೆದಿರುವ ಗಿಡ ಹಾಗೂ ಕಸವಿದ್ದಲ್ಲಿ ತೆರವು ಮಾಡಬೇಕು. ಜೋತು ಬಿದ್ದಿರುವ ವಿದ್ಯುತ್ ತಂತಿ ಹಾಗೂ ಇತರೆ ಕೇಬಲ್ಗಳಿದ್ದಲ್ಲಿ ತೆರವುಗೊಳಿಸಬೇಕೆಂದು ಸೂಚನೆ ನೀಡಿದರು.

ಅಗತ್ಯವಾದ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿ, ಬ್ಯಾರಿಕೇಡ್ ವ್ಯವಸ್ಥೆ, ಸರತಿ ಸಾಲಿನ ವ್ಯವಸ್ಥೆ, ಸೂಕ್ತ ಪಾರ್ಕಿಂಗ್ ಸೌಲಭ್ಯ, ಅಗ್ನಿಶಾಮಕ ವಾಹನ ನಿಯೋಜನೆ, ಬ್ರಹ್ಮ ರಥ ಎಳೆಯುವಾಗ ಭಕ್ತಾದಿಗಳು ರಥದ ಸಮೀಪಕ್ಕೆ ಬರದಂತೆ ರೋಪ್ ಸರ್ಕಲ್ ವ್ಯವಸ್ಥೆ ಮಾಡಬೇಕು. ದೇವಸ್ಥಾನದ ಸಮೀಪವಿರುವ ರಸ್ತೆ ಮತ್ತು ಚರಂಡಿ ಸ್ವಚ್ಛಗೊಳಿಸಬೇಕು. ದೇವಾಲಯದ ಒಳಭಾಗ ಮತ್ತು ಹೊರ ಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಕ್ರಮ ವಹಿಸುವುದು ಅಗತ್ಯ. ಶುದ್ಧ ಕುಡಿಯುವ ನೀರಿನ ಮೂಲಗಳನ್ನು ಶುಚಿಗೊಳಿಸಿ, ಹೆಚ್ಚುವರಿ ನಲ್ಲಿ ಅಳವಡಿಸಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭಕ್ತರು ದೇವರ ದರ್ಶನ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳಬೇಕು. ದೇವಾಲಯದ ವ್ಯಾಪ್ತಿಯ ಬೀದಿ ದೀಪಗಳು ಸರಿಪಡಿಸಿ ಸೂಕ್ತ ಬೆಳಕಿನ ವ್ಯವಸ್ಥೆಯಾಗಬೇಕು. ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ನಿಮಿಷಾಂಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net