

ಕುಶಾಲನಗರ:
ಹಾರಂಗಿ ಮತ್ತು ಕಾವೇರಿ ನದಿಗಳ ಸಂಗಮ ಕ್ಷೇತ್ರ ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಶನಿವಾರ ಶ್ರದ್ದಾಭಕ್ತಿಯಿಂದ ನಡೆಯಿತು. ಕೂಡಿಗೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ವಿಜೃಂಭಣೆಯ ರಥೋತ್ಸವಕ್ಕೆ ಸಾಕ್ಷಿಯಾದರು.
ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ- ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿಗಳು ನಡೆದವು. ಮಧ್ಯಾಹ್ನ 12-45ರ ಅಭಿಜಿನ್ ಲಗ್ನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಕಿಕ್ಕಿರಿದು ಸೇರಿದ ಭಕ್ತರ ಜಯಘೋಷಗಳ ಸದ್ದಿನ ಜತೆಯಲ್ಲಿ ಅಯ್ಯಪ್ಪ ವೃತಧಾರಿಗಳು ರಥದ ಮುಂದೆ ಕರ್ಪೂರ ಬೆಳಗಿಸಿದರು. ನಂತರ ದೇವಾಲಯದ ಕಿರಿದಾದ ರಸ್ತೆಯ ಮೂಲಕ ಸಾಗಿ ಬಂದ ರಥ ರಾಜ್ಯ ಹೆದ್ದಾರಿಯನ್ನು ಸೇರಿದಾಗ ಹೆದ್ದಾರಿಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತ ಸಮೂಹ ರಥದಲ್ಲಿನ ಶ್ರೀ ಸುಬ್ರಹ್ಮಣ್ಯ ದೇವರನ್ನು ಕಣ್ತುಂಬಿಕೊAಡರು.
ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿದ ರಥೋತ್ಸವ ಕೂಡುಮಂಗಳೂರು ಗ್ರಾಮದ ಸರ್ಕಲ್ ತನಕವೂ ಸಾಗಿ ಬಳಿಕ ಸ್ವಸ್ಥಾನಕ್ಕೆ ಮರಳಿತು.
ರಥೊತ್ಸವದ ಅಂಗವಾಗಿ ಕೂಡಿಗೆ ಮತ್ತು ಕೂಡುಮಂಗಳೂರು ಹನುಮ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವಯೋಲಿನ್ ಮತ್ತು ಕೇರಳ ಚಂಡೆವಾದ್ಯ ಭಕ್ತರನ್ನು ಆಕರ್ಷಿಸಿತು.
ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ಮತ್ತು ಅರಕಲಗೂಡಿನ ಶ್ರೀ ಹರಿ ನೇತೃತ್ವದ ತಂಡದಿAದ ಧಾರ್ಮಿಕ ವಿಧಿಗಳು ನಡೆದವು.
ರಥೋತ್ಸವದ ಅಂಗವಾಗಿ ದೇವಸ್ಥಾನದ ಜಾಗದಲ್ಲಿ ಜಾತ್ರೋತ್ಸವ ಗಮನ ಸೆಳೆಯಿತು. ಇದರ ಅಂಗವಾಗಿ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮದ ವರೆಗೆ ಎಲ್ಲಾ ಅಂಗಡಿ ಮುಂಗಟ್ಟು ಮನೆಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊAಡಿದ್ದವು. ಮುಂಜಾನೆಯಿAದಲೇ ಭಕ್ತರು ಹಣ್ಣು ಕಾಯಿ ಸೇರಿದಂತೆ ಹರಕೆಯನ್ನು ದೇವರಿಗೆ ಸಲ್ಲಿಸಿದರು.
ರಾತ್ರಿ 8 ಗಂಟೆ ನಂತರ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಆಕರ್ಷಕ ಮದ್ದು ಗುಂಡುಗಳ ಪ್ರದರ್ಶನ ಮತ್ತು ಬಾಣ ಬಿರುಸುಗಳ ಚಿತ್ತಾರ ನೋಡುಗರ ಮನಸೂರೆಗೊಂಡಿತು.
ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕರೂ ಆದ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವೃತಾಚರಣಾ ಸಮಿತಿ ಅಧ್ಯಕ್ಷ ಪೊನ್ನಪ್ಪ, ಕಾರ್ಯದರ್ಶಿ ಶಿವಕುಮಾರ್, ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್ ಮತ್ತಿತರರು ಈ ಸಂದರ್ಭ ಇದ್ದರು.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಕುಶಾಲನಗರ ಗ್ರಾಮಾಂತರ ಪೊಲಿಸ್ ಠಾಣಾಧಿಕಾರಿ ಮೋಹನ್ ರಾಜ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪೋಲಿಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.