

ಮಡಿಕೇರಿ: ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ನ.೧೦ ಮತ್ತು ೧೧ ರಂದು ಕೊಡಗು ಜಿಲ್ಲೆಯ ಐದು ತಾಲೂಕಿನ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದ್ದು, ಕನ್ನಡ ರಥಯಾತ್ರೆಯನ್ನು ಬರಮಾಡಿಕೊಳ್ಳುವ ಸಂಬಂಧ ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳು, ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮನವಿ ಮಾಡಿದರು.
ಕನ್ನಡ ಜ್ಯೋತಿ ರಥಯಾತ್ರೆ ಬರಮಾಡಿಕೊಳ್ಳುವ ಸಂಬಂಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ನ.೧೦ ರಂದು ಬೆಳಗ್ಗಿನ ವೇಳೆ ಸಂಪಾಜೆಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಬರಮಾಡಿಕೊಳ್ಳಬೇಕಿದೆ. ನಂತರ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ. ನಂತರ ಪೊನ್ನಂಪೇಟೆಗೆ ತೆರಳಲಿದೆ. ಬಳಿಕ ನ.೧೧ ರಂದು ಪೊನ್ನಂಪೇಟೆಯಿಂದ ಪಾಲಿಬೆಟ್ಟ-ಸಿದ್ದಾಪುರ ಮಾರ್ಗ ಕುಶಾಲನಗರ ತಲುಪಿ, ಕನ್ನಡ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಸೋಮವಾರಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳಲಿದ್ದು, ಈ ಸಂಬಂಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಸ್ತ್ರೀಶಕ್ತಿ ಗುಂಪುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೀಗೆ ಹಲವರು ಪಾಲ್ಗೊಂಡು ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯನ್ನು ಸ್ವಾಗತಿಸಬೇಕಿದೆ. ವಿವಿಧ ಸ್ಥಳಗಳಿಗೆ ಕನಿಷ್ಟ ಎರಡು ಕಲಾತಂಡಗಳನ್ನು ಆಹ್ವಾನಿಸಬೇಕು. ಪೂರ್ಣಕುಂಭ ಸ್ವಾಗತ, ಆರತಿ ಬೆಳಗುವುದು, ತಳಿರು ತೋರಣ ಕಟ್ಟುವುದು, ರಂಗೋಲಿ ಬಿಡಿಸುವುದು ಹೀಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಎಲ್ಲರೂ ಶ್ರಮಿಸುವಂತೆ ಸಲಹೆ ನೀಡಿದರು.
ನ.೭ ಅಥವಾ ೮ ರಂದು ಮತ್ತೊಂದು ವಿಡಿಯೋ ಸಂವಾದ ಮೂಲಕ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಲಾಗುವುದು. ತಮ್ಮ ತಮ್ಮ ಹಂತದಲ್ಲಿಯೂ ಸಹ ಅಗತ್ಯ ತಯಾರಿ ಬಗ್ಗೆ ಪೂರ್ವಭಾವಿ ಸಭೆಸಬೇಕು. ತಹಶೀಲ್ದಾರರು, ತಾ.ಪಂ.ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ಸಿಗೆ ದುಡಿಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ನ.೧೦ ರಂದು ಬೆಳಗ್ಗಿನ ವೇಳೆ ಕನ್ನಡ ರಥವು ಸಂಪಾಜೆಗೆ ಆಗಮಿಸಲಿದೆ. ಅಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಮಟ್ಟದ ಅಧಿಕಾರಿಗಳು ಬರಮಾಡಿಕೊಳ್ಳಬೇಕಿದೆ. ಅಂದು ಬೆಳಗ್ಗೆ ೧೦.೩೦ ಗಂಟೆಗೆ ಮಡಿಕೇರಿಗೆ ಆಗಮಿಸಲಿದ್ದು, ಪ್ರತಿಯೊಬ್ಬರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಿದರು.
ಮಡಿಕೇರಿಯಿಂದ ಮೂರ್ನಾಡು-ವಿರಾಜಪೇಟೆ-ಗೋಣಿಕೊಪ್ಪ-ಪೊನ್ನಂಪೇಟೆಗೆ ತೆರಳಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ನ.೧೧ ರಂದು ಕುಶಾಲನಗರದಲ್ಲಿ ೫ ಸಹಸ್ರ ಜನರು ಕನ್ನಡ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಡಗೀತೆ ಸೇರಿದಂತೆ ವಿವಿಧ ಕನ್ನಡ ಗೀತೆಗಳನ್ನು ಹಾಡಲಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ರಥಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡು ಯಶಸ್ವಿಯಾಗಿ ಆಚರಿಸಬೇಕಿದೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಇಒಗಳು, ಬಿಇಒಗಳು, ಶಿಶು ಕಲ್ಯಾಣ ಅಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸ್ತ್ರೀಶಕ್ತಿ ಗುಂಪುಗಳು, ಅಂಗನವಾಡಿ ಕಾರ್ಯಕರ್ತರು ಕನ್ನಡ ರಥವನ್ನು ಬರಮಾಡಿಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ, ರಥ ತೆರಳುವ ಮಾರ್ಗದಲ್ಲಿ ಗ್ರಾ.ಪಂ.ಮಟ್ಟದಲ್ಲಿಯೂ ಸಹ ಸ್ವಾಗತಿಸುವಂತಾಗಬೇಕು. ರಾಜ್ಯದ ಗಡಿಭಾಗದ ಜಿಲ್ಲೆಯಾದ ಕೊಡಗಿನಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಬೇಕು. ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮತನಾಡಿದರು. ಸಭೆಯಲ್ಲಿ ಕಸಾಪ ಪದಾಧಿಕಾರಿಗಳಾದ ಕೆ.ಟಿ.ಬೇಬಿ ಮ್ಯಾಥ್ಯೂ, ಪರಮೇಶ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ರಾಜೇಶ್ ಪದ್ಮನಾಭ, ಕೆ.ಎಸ್.ನಾಗೇಶ್, ವಿವಿಧ ಹೋಬಳಿ ಘಟಕದ ಅಧ್ಯಕ್ಷರಾದ ಹರಿಣಿ ವಿಜಯ, ಸುನಿಲ್ ಪತ್ರಾವೋ, ಡಿವೈಎಸ್‌ಪಿ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ರಾಮಚಂದ್ರ, ಮೋಹನ್ ಕುಮಾರ್, ಶ್ರೀಧರ, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಇತರರಿದ್ದರು.