ಕರ್ನಾಟಕ ಸಂಭ್ರಮ ರಥಯಾತ್ರೆಗೆ ಹೊನ್ನಾಳಿಯಲ್ಲಿ ಅದ್ದೂರಿ ಸ್ವಾಗತ

72
Published on

ಹೊನ್ನಾಳಿ: ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ಜ್ಯೋತಿ ರಥಯಾತ್ರೆಯು ಹರಿಹರದಿಂದ ಹೊನ್ನಾಳಿಗೆ ಭಾನುವಾರ ಆಗಮಿಸಿತು. ಪಟ್ಟಣದ ಟಿ.ಬಿ ವೃತ್ತದದಲ್ಲಿ ಭವ್ಯ ಸ್ವಾಗತದೊಂದಿಗೆ ರಥಯಾತ್ರೆಗೆ ಶಾಸಕ ಡಿ.ಜಿ. ಶಾಂತನಗೌಡ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜ್ಯವನ್ನು ಮೈಸೂರಿನಿಂದ ಕರ್ನಾಟಕ ಎಂದು ನಾಮಕರಣ ಮಾಡುವ ಸುವರ್ಣ ಮಹೋತ್ಸವ ಗುರುತಿಸಲು ಸರ್ಕಾರ ಕರ್ನಾಟಕ ಸಂಭ್ರಮ 50 ಆಚರಿಸುತ್ತಿದೆ. 1973ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಲಾಗಿತ್ತು ಎಂದು ವಿವರಿಸಿದರು.

ರಾಜ್ಯದೆಲ್ಲೆಡೆ ರಥಯಾತ್ರೆ ಸಂಚರಿಸಿ ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. 2025ರ ನವಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಅವಿಸ್ಮರಣೀಯ ಕಾರ್ಯಕ್ರಮ ನಡೆಯಲಿದೆ ಎಂದರು.

ನವೆಂಬರ್ 2 ರಂದು ಚಾಲನೆ: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲ್ಲೆೆಯಲ್ಲಿ ಹಂಪಿಯಲ್ಲಿ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈಗ ನಮ್ಮ ತಾಲೂಕಿಗೆ ಬಂದಿದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಮಾತನಾಡಿ, ರಥಯಾತ್ರೆಯಿಂದ ನಮ್ಮ ನಾಡುನುಡಿಗಾಗಿ ಹೋರಾಟ ಮಾಡಿದ ಮಹನೀಯರು, ಮಹಾನ್ ಕವಿಗಳು, ಲೇಖಕರು, ವಿದ್ವಾಂಸರು, ರಾಜಮಹರಾಜರ ಪರಿಚಯ ಆಗುತ್ತಿದೆ ಎಂದರು.

ಸೋಮವಾರ ಬೆಳಗ್ಗೆ ಜ್ಯೋತಿ ರಥಯಾತ್ರೆಯನ್ನು ಕಮ್ಮಾರಗಟ್ಟೆ, ಬೆನಕನಹಳ್ಳಿ, ಸಾಸ್ವೆಹಳ್ಳಿ ಮೂಲಕ ಚನ್ನಗಿರಿಗೆ ಬೀಳ್ಕೊಡಲಾಗುವುದು ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.

ರಥಯಾತ್ರೆ ಟಿ.ಬಿ ವೃತ್ತದ ಮೂಲಕ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ನ್ಯಾಮತಿ ರಸ್ತೆ ಮೂಲಕ ಹಿರೇಕಲ್ಮಠ ರಸ್ತೆ, ನಂತರ ಕೆನರಾ ಬ್ಯಾಂಕ್ ರಸ್ತೆ ಮಾರ್ಗವಾಗಿ ಚಲಿಸಿತು. ರಥ ಬರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕನ್ನಡಧ್ವಜ, ಬಾಳೆಕಂಬ ಕಟ್ಟಿ ಅಲಂಕರಿಸಲಾಗಿತ್ತು.

ತಾಪಂ ಇಒ ರಾಘವೇಂದ್ರ, ಗ್ರೇಡ್ 2 ತಹಸೀಲ್ದಾರ್ ಸುರೇಶ್, ಮುಖ್ಯಾಧಿಕಾರಿ ಲೀಲಾವತಿ, ತಾಲೂಕು ಮಟ್ಟದ ಅಧಿಕಾರಿಗಳಾದ ಮೃತ್ಯುಂಜಯ, ಉಮಾ, ರೇಖಾ, ಜ್ಯೋತಿ, ಉಪ ತಹಸೀಲ್ದಾರ್ ಚಂದ್ರಪ್ಪ, ಮಂಜುನಾಥ್ ಇಂಗಳಗೊಂದಿ, ರಮೇಶ್, ಸತ್ತಿಗೆ ಲೊಕೇಶ್, ಜಯಪ್ರಕಾಶ್, ಕಸಾಪ ಅಧ್ಯಕ್ಷ ಮುರಿಗೆಪ್ಪಗೌಡ, ಶೇಖರಪ್ಪ, ಗೋವಿಂದಪ್ಪ, ಕರವೇ ಮುಖಂಡರಾದ ಕತ್ತಿಗೆ ನಾಗರಾಜ್, ವಿನಯ್‌ವಗ್ಗರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net