ಹೆಚ್ಚುವರಿ ಹಣ ಪಡೆದರೆ ಕಠಿಣ ಕ್ರಮ

ragi
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರತಿ ಬಾರಿಯಂತೆ ಈ ಬಾರಿಯೂ ರಾಗಿ ಬೆಳೆಗಾರರ ನೆರವಿಗೆ ದಾವಿಸಿರುವ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಕ್ಕೆ ಹೆಚ್ಚುವರಿ ದರ ಪಡೆದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ರವಾನಿಸಿದೆ.

ಬಯಲು ಸೀಮೆ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಮಳೆಯೊಂದಿಗಿನ ಜೂಜಾಟದಲ್ಲಿ ರಾಗಿ ಬೆಳೆಗಾರರು ಹೈರಾಣಾಗುವುದು ಸಾಮಾನ್ಯವಾಗಿದೆ. ಅನೇಕ ಬಾರಿ ನಷ್ಟ ಎದುರಿಸುವ ಪರಿಸ್ಥಿತಿ ಕಂಡುಬರುತ್ತದೆ. ಇಂಥ ಸಂದರ್ಭದಲ್ಲಿ ರಾಗಿ ಕಟಾವಿಗೆ ಮನಬಂದಂತೆ ಹಣ ವಸೂಲಿ ಮಾಡುವ ಬಗ್ಗೆ ಆಗಾಗ ರೈತರಿಂದ ದೂರು ಕೇಳಿಬರುತ್ತಿರುತ್ತದೆ ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ ಈ ಬಾರಿಯೂ ದರ ನಿಗಧಿ ಮಾಡಿ ಆದೇಶ ಹೊರಡಿಸಿದ್ದು, ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ರವಾನಿಸಿದೆ. ಒಂದು ವೇಳೆ ಎಲ್ಲಿಯಾದರೂ ನಿಗಧಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ತಕ್ಷಣ ದೂರು ನೀಡುವಂತೆ ರೈತರಲ್ಲಿ ಮನವಿ ಮಾಡಿದೆ.

69,230 ಹೆಕ್ಟೇರ್ ರಾಗಿ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆಯು 69,230 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದ್ದು, ಬಹುತೇಕ ರಾಗಿ ಬೆಳೆ ತೆನೆ ತುಂಬುವ ಹಾಗೂ ಕಟಾವು ಹಂತದಲ್ಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯ ಬಹುತೇಕ ರೈತರು ರಾಗಿ ಬೆಳೆಯನ್ನು ಕಟಾವು ಯಂತ್ರಗಳ ಮೂಲಕ ಕಟಾವಿಗೆ ಮುಂದಾಗುವುದರಿಂದ ಖಾಸಗಿ ರಾಗಿ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ 3,500 ರೂಗಳಿಂದ 4 ಸಾವಿರ ರೂಗಳ ವರೆಗೆ ಬಾಡಿಗೆ ಹಣ ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರಿಂದ ದೂರು ಕೇಳಿಬರುತ್ತಿದೆ.

ನೆರೆ ರಾಜ್ಯದ ಯಂತ್ರಗಳು ದುಬಾರಿ: ಜಿಲ್ಲೆಯಲ್ಲಿ ರಾಗಿ ಕಟಾವಿಗೆ ತಮಿಳುನಾಡು, ಆಂಧ್ರ ಸೇರಿ ನಾನಾ ಕಡೆಗಳಿಂದ ಗುತ್ತಿಗೆ ಆಧಾರದಲ್ಲಿ ಕಟಾವು ಯಂತ್ರಗಳನ್ನು ಜಿಲ್ಲೆಗೆ ಕರೆತರಲಾಗುತ್ತದೆ. ಈ ಯಂತ್ರಗಳಲ್ಲಿ ಪ್ರತಿ ಎಕರೆ ರಾಗಿ ಕಟಾವಿಗೆ 5 ಸಾವಿರ ರೂಪಾಯಿಗೂ ಹೆಚ್ಚು ಹಣ ಪಡೆಯಲಾಗುತ್ತದೆ. ಇದು ರೆತರಿಗೆ ಹೊರೆಯಾಗಿದೆ. ಜಿಲ್ಲಾಡಳಿತ ಇದನ್ನು ತಪ್ಪಿಸಲು ಕಟಾವು ಯಂತ್ರದ ಬಾಡಿಗೆ ದರವನ್ನು ನಿಗದಿಪಡಿಸಿದೆ. ಇದನ್ನು ಮೀರಿ ಹೆಚ್ಚು ದರ ಪಡೆದರೆ ಕ್ರಮ ಕೆಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನವೆಂಬರ್ ತಿಂಗಳ 3ನೇ ವಾರದ ವೇಳೆ ರಾಗಿ ಕಟಾವು ಕಾರ್ಯ ಚುರುಕು ಪಡೆದುಕೊಳ್ಳುತ್ತವೆ. ಸಾಮಾನ್ಯವಾಗಿ ಪ್ರತಿ ಎಕರೆ ರಾಗಿ ಕಟಾವಿಗೆ ಯಂತ್ರ ಬಾಡಿಗೆ 5 ಸಾವಿರ ರೂಪಾಯಿಯಿಂದ 6 ಸಾವಿರ ರೂಪಾಯಿವರೆಗೆ ಕೆಲವು ಸಂದರ್ಭದಲ್ಲಿ ಬೇಡಿಕೆ ಇಡಲಾಗುತ್ತದೆ ಎಂಬ ಆರೋಪಗಳಿವೆ, ಹೀಗಾದರೆ ಪ್ರತಿ ಗಂಟೆಗೆ ಬಾಡಿಗೆ ದರದ ಲೆಕ್ಕಾಚಾರ ಮಾಡಿದರೆ, ಪ್ರತಿ ಗಂಟೆಗೆ 4 ಸಾವಿರದಿಂದ 4500ರೂ.ಗಳಷ್ಟು ಬಾಡಿಗೆ ಪಡೆಯಲಾಗುತ್ತದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರುಗಳು ಕೇಳಿ ಬಂದಿವೆ.

ಆರ್ಥಿಕ ಹೊರೆ: ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ, ಪ್ರಸ್ತುತ ಇಂಧನ ವೆಚ್ಚ ಹಾಗೂ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿದ್ದು, ಇತರೇ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಯಂತ್ರಕ್ಕೆ ಕಳೆದ ವರ್ಷ ನಿರ್ಧರಿಸಿದಂತೆ, ಪ್ರತಿ ಗಂಟೆಗೆ ನ್ಯೂ ಹಾಲೆಂಡ್, ಜಾನ್ಡೀರ್ ಕಂಪನಿಯ ದೊಡ್ಡ ಕಟಾವು ಯಂತ್ರಕ್ಕೆ ಗಂಟೆಗೆ 3,350 ರೂ. ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಗಂಟೆಗೆ 2,700 ರೂ.ಮೀರದಂತೆ ಬಾಡಿಗೆ ನಿಗದಿಪಡಿಸಿದೆ. ತಪ್ಪಿದ್ದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net