

ಬೆಳಗಾವಿ: ತೀವ್ರ ಬರದಿಂದ ಕಂಗಾಲಾಗಿರುವ ಕಬ್ಬು ಬೆಳೆಗಾರರು ಇದೀಗ ಸರ್ಕಾರ ನಿಗದಿ ಮಾಡಿರುವ ದರವನ್ನು ಸಕ್ಕರೆ ಕಾರ್ಖಾನೆಗಳು ಘೋಷಣೆ ಮಾಡದ ಹಿನ್ನೆಲೆಯಲ್ಲಿ ತಂಕಕ್ಕೊಳಗಾಗಿದ್ದಾರೆ.
ಕಬ್ಬು ದರ ನಿಗದಿಗೆ ಮಾನದಂಡವಾಗಿರುವ ಕಬ್ಬು ರಿಕವರಿ (ಸಕ್ಕರೆ ಅಂಶ), ಕಬ್ಬು ಕಟಾವು ಮತ್ತು ಸಾಗಣೆ (ಎಚ್ ಆ್ಯಂಡ್ ಟಿ) ಹಾಗೂ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ (ಎಫ್‌ಆರ್‌ಪಿ) ನಿಗದಿ ದರವೇ ಕಗ್ಗಂಟಾಗಿ ಪರಿಣಮಿಸಿದೆ.
ಎಚ್ ಆ್ಯಂಡ್ ಟಿ ಹೊರತುಪಡಿಸಿ ಟನ್ ಕಬ್ಬಿಗೆ ಕನಿಷ್ಠ 3,500 ರಿಂದ 4,000 ರೂ. ವರೆಗೆ ದರ ನೀಡಲು ಕಬ್ಬು ಬೆಳೆಗಾರರು, ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರ್ಮಿಕರ ವೇತನ, ಖರ್ಚು-ವೆಚ್ಚಗಳು ಹೆಚ್ಚಿನ ಹೊರೆಯಾಗುತ್ತಿವೆ. ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏರಿಳಿತವಾಗುತ್ತಿವೆ ಎಂಬ ಕಾರಣ ಮುಂದಿಟ್ಟುಕೊಂಡು ಅಷ್ಟು ದರ ನೀಡಲು ಒಪ್ಪುತ್ತಿಲ್ಲ. ಇದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ.
ಕೇಂದ್ರ ಸರ್ಕಾರವು ರಿಕವರಿ ಹೆಚ್ಚಿಸಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪ್ರತಿ ಟನ್‌ಗೆ ಸರಾಸರಿ 3,346 ರಿಂದ 3,693 ರೂ. ಎಫ್‌ಆರ್‌ಪಿ ನಿಗದಿಪಡಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ಎಚ್ ಆ್ಯಂಡ್ ಟಿ 680 ರಿಂದ 1,000 ರೂ.ವರೆಗೆ ಕಡಿತಗೊಳಿಸುತ್ತವೆ. ಇದರಿಂದಾಗಿ ಬೆಳೆಗಾರರಿಗೆ ಟನ್ ಕಬ್ಬಿನ 2,550 ರಿಂದ 2,800 ರೂ.ವರೆಗೆ ದರ ನೀಡುತ್ತಿವೆ. ಪರಿಣಾಮ ಪ್ರತಿ ಟನ್‌ಗೆ ರೈತರಿಗೆ 330 ರಿಂದ 650ರೂ. ವರೆಗೆ ನಷ್ಟವಾಗುತ್ತಿದೆ. ಹಾಗಾಗಿ ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸುವ ಮುನ್ನ ದರ ಘೋಷಣೆ ಮಾಡಬೇಕು.
ಕಾರ್ಖಾನೆಗಳ ಮುಂಭಾಗದಲ್ಲಿ ಎ್ಆರ್‌ಪಿ, ಎಚ್ ಆ್ಯಂಡ್ ಟಿ ದರದ ನಾಮಲಕ ಹಾಕಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ. ಪ್ರಸುತ್ತ ಜಿಲ್ಲೆಯ 2.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಆದರೆ, ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಮಳೆ ಆಗದಿರುವುದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳು ನೀರಿಲ್ಲದೆ ಬತ್ತಿದ್ದರಿಂದ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಹಾಳಾಗಿದೆ. ಮತ್ತೊಂದೆಡೆ ನೀರಿನ ಅಭಾವದಿಂದ ಇಳುವರಿ ಶೇ.35 ಕಡಿಮೆಯಾಗಿದೆ. ಉತ್ತಮ ಮಳೆಯಾಗಿದ್ದರೆ ಹೊಸ ಕಬ್ಬು ಎಕರೆಗೆ 68ರಿಂದ 79 ಟನ್‌ವರೆಗೆ, ಹಳೆ ಕಬ್ಬು ಎಕರೆಗೆ 40 ರಿಂದ 55 ಟನ್‌ವರೆಗೆ ಇಳುವರಿ ಬರುತ್ತಿತ್ತು. ಬರದಿಂದಾಗಿ ಎಕರೆಗೆ ಸರಾಸರಿ 18 ರಿಂದ 20 ಟನ್ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ 27 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಕಾಗುವುದಿಲ್ಲ. ಈ ಬಾರಿ ಎರಡು ತಿಂಗಳಲ್ಲೇ ಕಬ್ಬು ಹಂಗಾಮು ಮುಗಿಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಸಕ್ಕರೆ ಕಾರ್ಖಾನೆಗಳು ಎಚ್ ಆ್ಯಂಡ್ ಟಿ ಹೊರತುಪಡಿಸಿ ಟನ್ ಕಬ್ಬಿಗೆ ಕನಿಷ್ಠ 3,500ರಿಂದ 4,000 ರೂ.ವರೆಗೆ ದರ ನೀಡಬೇಕು. ಕಾರ್ಖಾನೆಗಳು ಪ್ರತಿ ಲೋಡ್‌ಗೆ 1 ಟನ್ ವರೆಗೆ ತೂಕದಲ್ಲಿ ಮೋಸ ಮಾಡುತ್ತಿವೆ. ಇದರಿಂದ ಒಂದು ಎಕರೆಗೆ 5ರಿಂದ 8 ಟನ್‌ವರೆಗೆ ರೈತರಿಗೆ ನಷ್ಟವಾಗುತ್ತಿದೆ. ಜಿಲ್ಲಾಡಳಿತ, ಕೃಷಿ, ಆಹಾರ ಇಲಾಖೆ ಅಧಿಕಾರಿಗಳು ಸಕ್ಕರೆ ಲಾಬಿ ಹಿನ್ನೆಲೆ ಮೌನಕ್ಕೆ ಶರಣಾಗಿದ್ದಾರೆ.| ಚೂನಪ್ಪ ಪೂಜೇರಿ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಸರ್ಕಾರ ನಿಗದಿಪಡಿಸಿರುವ ಎ್ಆರ್‌ಪಿಯನ್ನೇ ಕಬ್ಬು ಬೆಳೆಗಾರರಿಗೆ ನೀಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ಅನ್ವಯ ಎಚ್ ಆ್ಯಂಡ್ ಟಿ ದರ ನಿಗದಿಪಡಿಸಬೇಕು. ಈ ವಿಷಯದಲ್ಲಿ ರೈತರಿಂದ ಹೆಚ್ಚುವರಿ ಹಣ ಕಡಿತಗೊಳಿಸುವ ಕಾರ್ಖಾನೆ ವಿರುದ್ಧ ಕ್ರಮ ಜರುಗಿಸಲಾಗುವುದು.| ನಿತೇಶ ಪಾಟೀಲ ಜಿಲ್ಲಾಧಿಕಾರಿ ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ