

ಎನ್.ಆರ್.ಪುರ: ಉಪ್ಪಿನಿಂದ ಉಕ್ಕಿನವರೆಗೂ ಹಾಗೂ ಪಿನ್‌ನಿಂದ ಏರೋಪ್ಲೇನ್‌ವರೆಗೂ ಉದ್ಯಮ ನಡೆಸಿ ಯಶಸ್ಸುಕಂಡಿದ್ದ ದೇಶದ ಅತಿ ದೊಡ್ಡ ಉದ್ಯಮಿ ರತನ್ ಟಾಟಾ ಮಾನವೀಯ ಗುಣವುಳ್ಳವರು ಎಂದು ತಾಲೂಕು ಹಿರಿಯ ನಾಗರಿಕ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ಹೇಳಿದರು.
ಗುರುವಾರ ಹಿರಿಯ ನಾಗರಿಕ ಸಮಿತಿಯಿಂದ ಏರ್ಪಡಿಸಿದ್ದ ರತನ್ ಟಾಟಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ರತನ್ ಟಾಟಾ ದೇಶಕ್ಕೆ ಶಕ್ತಿ ಮೀರಿ ಎಲ್ಲ ರಂಗಗಳಲ್ಲೂ ಕೊಡುಗೆ ನೀಡಿದ್ದಾರೆ ಎಂದರು.
ತಾಲೂಕು ಹಿರಿಯ ನಾಗರಿಕ ಸಮಿತಿ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ರತನ್ ಟಾಟಾ ಸರಳ, ಸಜ್ಜನ. ವಿಶ್ವ ಮಟ್ಟದಲ್ಲಿ ಭಾರತ ಹೆಸರುಗಳಿಸಲು ರತನ್ ಟಾಟಾ ಅವರ ಪಾತ್ರ ಇದೆ ಎಂದರು.
ಹಿರಿಯ ನಾಗರಿಕ ಸಮಿತಿ ಖಜಾಂಚಿ ಕೆ.ಎಸ್.ರಾಜಕುಮಾರ್ ಮಾತನಾಡಿ, ಕರೊನಾ ಸಮಯದಲ್ಲಿ ರತನ್ ಟಾಟಾ ಅವರ ಸಹಕಾರ ಮರೆಯುವಂತಿಲ್ಲ. ಇಂತಹ ಚೇತನ ಅಗಲಿರುವುದು ಭಾರತ ದೇಶಕ್ಕೆ ದೊಡ್ಡ ನಷ್ಟ ಎಂದರು. ಬಿ.ಕೆ.ಜಾನಕೀರಾಮ್, ಶಿವಕುಮಾರ್, ಜಯಂತಿ, ಚಕ್ರಪಾಣಿ ಇದ್ದರು.