ಮುಂಡಗೋಡದಲ್ಲಿ ಇಲಿ ವಾರ ಆಚರಣೆ

MND ELI VAR
Published on

ಮುಂಡಗೋಡ: ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನಲ್ಲಿ ಕುರಿ ಹಾಗೂ ಕೋಳಿಗಳನ್ನು ಬಲಿ ಕೊಟ್ಟು ಮಾಂಸದೂಟ ಸವಿಯುವ ಮೂಲಕ ಇಲಿವಾರವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಇಲಿ ವಾರ: ಭಾದ್ರಪದ ಮಾಸದ ಚೌತಿಯಂದು ಗಣಪತಿಯನ್ನು ಪ್ರತಿಷ್ಠಾಪಿಸಿದ ಮರುದಿನ (ಪಂಚಮಿ)ಯನ್ನು ಇಲಿ ವಾರವನ್ನಾಗಿ ಆಚರಿಸಲಾಗುತ್ತದೆ. ಇದೂ ತಾಲೂಕಿನಲ್ಲಿ ಹಲವಾರು ದಶಕಗಳಿಂದ ನಡೆದು ಬಂದ ಸಂಪ್ರದಾಯವಾಗಿದ್ದು, ಅಂದು ಮಾಂಸಾಹಾರಿಗಳು ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಮಾಂಸದೂಟ ಸವಿಯುತ್ತಾರೆ.

ಗ್ರಾಮೀಣ ಭಾಗದಲ್ಲಿ ಹತ್ತಾರು ಜನರು ಸೇರಿ ಒಂದು ಕುರಿಯನ್ನು ಖರೀದಿಸಿ ಅದರ ಮಾಂಸವನ್ನು ಸಮನಾಗಿ ಭಾಗ ಮಾಡಿಕೊಳ್ಳುತ್ತಾರೆ. ಆಮೇಲೆ ಮನೆಯಲ್ಲಿ ಊಟ ತಯಾರಿಸಿ ಭೋಜನ ಮಾಡುತ್ತಾರೆ. ಗುರುವಾರ ತಾಲೂಕಿನ ಬಹುತೇಕ ಗ್ರಾಮದಲ್ಲಿ ಐದಾರು ಕುರಿಗಳನ್ನು ಬಲಿಕೊಡಲಾಗಿದೆ. ಇದರಿಂದಾಗಿ ಪಟ್ಟಣ ವ್ಯಾಪ್ತಿಯ ಮೂವತ್ತಕ್ಕೂ ಹೆಚ್ಚು ಚಿಕನ್ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು. ಪಟ್ಟಣದ ಶಿರಸಿ ರಸ್ತೆಯಲ್ಲಿನ ಹಾಗೂ ತಾಲೂಕಿನ ಕಾತೂರು ಗ್ರಾಮದಲ್ಲಿ ಕುರಿಮಾಂಸದ ಅಂಗಡಿಗಳ ವ್ಯಾಪಾರಿಗಳು ಗ್ರಾಹಕರ ಎದುರಲ್ಲೆ ತಾಜಾ ಮಾಂಸವನ್ನು ಮಾರಾಟ ಮಾಡುತ್ತಾರೆ. ಆದ್ದರಿಂದ ತಾಲೂಕಿನ ವಿವಿಧ ಗ್ರಾಮಗಳ ಜನರು ಕಾತೂರ ಹಾಗೂ ಮುಂಡಗೋಡಕ್ಕೆ ತೆರಳಿ ಕುರಿ ಮಾಂಸ ಖರೀದಿಸಿಕೊಂಡು ಬರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net