

ದೊಡ್ಡಬಳ್ಳಾಪುರ: ರಸ್ತೆ ಸುರಕ್ಷತೆಯಲ್ಲಿ ವಾಹನ ಚಾಲಕರಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಯಾರೇ ಆಗಲಿ ಜೀವದ ಬಗೆಗಿನ ಕಾಳಜಿಯೊಂದಿಗೆ ಕುಟುಂಬದವರ ಹಾಗೂ ಸಾರ್ವಜನಿಕರ ಬಗ್ಗೆಯೂ ಆಲೋಚಿಸಬೇಕು. ಸಾರ್ವಜನಿಕರ ಆಸ್ತಿಗೆ ಧಕ್ಕೆ ಮಾಡುವ ಕೆಲಸ ಯಾರೂ ಮಾಡಬಾರದು ಎಂದು ಡಿವೈಎಸ್‌ಪಿ ಟಿ.ರಂಗಪ್ಪ ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೊಡ್ಡಬಳ್ಳಾಪುರ ಘಟಕದಿಂದ ಸಾರಿಗೆ ಸಂಸ್ಥೆ ಘಟಕದಲ್ಲಿ ಹಾಗೂ ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಂಸ್ಕೃತಿಕ ಕಲಾ ಕೂಟದ ಕಲಾವಿದರು ರಸ್ತೆ ಸುರಕ್ಷತೆ ಜೀವನ ರಕ್ಷೆ, ಬದುಕಿ ಬದುಕಿಸಿ ಬೀದಿ ನಾಟಕ ಪ್ರದರ್ಶನದ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲಿದ್ದರೆ, ಅಪಘಾತಗಳು ಸಂಭವಿಸುತ್ತವೆ. ಇದು ನಿಮ್ಮ ಜೀವದೊಂದಿಗೆ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ ಕುರಿತ ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕಬಳ್ಳಾಪುರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು ಮಾತನಾಡಿ, ಸಾರಿಗೆ ಸಂಸ್ಥೆಯ ನೌಕರರಿಗಷ್ಟೇ ಅಲ್ಲದೇ ಸಾರ್ವಜನಿಕರಿರೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಘಟಕದಿಂದ ಕಾರ‌್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಂಸ್ಕೃತಿಕ ಕಲಾ ಕೂಟದ ಕಲಾವಿದರು ರಸ್ತೆ ಸುರಕ್ಷತೆ ಜೀವನ ರಕ್ಷೆ, ಬದುಕಿ ಬದುಕಿಸಿ ಬೀದಿ ನಾಟಕ ಪ್ರದರ್ಶನದಲ್ಲಿ ಪ್ರಯಾಣಿಕರ ವಾಹನ ಸುರಕ್ಷತೆ, ಅಪಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಸಾರಿಗೆ ಸಂಸ್ಥೆಯ ಸೌಲಭ್ಯಗಳು, ರಸ್ತೆ ಸುರಕ್ಷತಾ ನಿಯಮಗಳು ಮೊದಲಾ ವಿಷಯಗಳ ಮೇಲೆ ಬೆಳಕು ಚೆಲ್ಲಲಾಯಿತು. ಟಿ.ಎನ್.ಬಾಲಕೃಷ್ಣ ನಿರ್ದೇಶಿಸಿದ್ದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕಬಳ್ಳಾಪುರ ವಿಭಾಗ ವಿಭಾಗೀಯ ಅಭಿಯಂತ ನವೀನ್, ಉಸ್ತುವಾರಿ ಅಧಿಕಾರಿಗಳಾದ ವೆಂಕಟರಮಣಪ್ಪ, ಅಗ್ನಿಶಾಮಕ ಅಧಿಕಾರಿ ಗೋವಿಂದರಾಜ್ ಮತ್ತಿತರರಿದ್ದರು.