ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತ್ಯಾಜ್ಯ ರಾಶಿ ದರ್ಶನ

FotoJet (1)
Published on

ಕೋಲಾರ : ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ನಗರ ಮತ್ತು ಪಟ್ಟಣ ಪ್ರದೇಶದ ತ್ಯಾಜ್ಯ ಸುರಿಯುತ್ತಿರುವುದರಿಂದ ಪರಿಸರಕ್ಕೆ ಮತ್ತಷ್ಟು ಹಾನಿಯಾಗುತ್ತಿದೆ. ತ್ಯಾಜ್ಯದ ಜತೆಗೆ ಅಲ್ಲಿ ಬಿದ್ದಿರುವ ಪ್ಲಾಸ್ಟಿಕ್​ನ್ನು ಸಾಕು ಮತ್ತು ಕಾಡು ಪ್ರಾಣಿಗಳ ದೇಹ ಸೇರುತ್ತಿದ್ದು, ಜೀವ ಸಂಕುಲಕ್ಕೂ ಕಂಟಕ ತಂದೊಡ್ಡಿದೆ.

ಕೋಲಾರ ಸುತ್ತಮುತ್ತಲಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಸೇರಿ ಪ್ರಮುಖ ಪಟ್ಟಣ ಮತ್ತು ನಗರ ಸಂಪರ್ಕ ಕಲ್ಪಿಸುವ ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಆಸ್ಪತ್ರೆಗಳು, ಹೋಟೆಲ್​ಗಳು ಮತ್ತು ಕಾರ್ಖಾನೆಗಳಿಂದ ಹೊರಬೀಳುವ ತ್ಯಾಜ್ಯವನ್ನು ರಾತ್ರೋರಾತ್ರಿ ಹತ್ತಿರದ ರಸ್ತೆಗಳ ಪಕ್ಕದಲ್ಲೇ ಸುರಿದು ಪರಾರಿಯಾಗುತ್ತಿದ್ದು, ಇದರ ವಿರುದ್ಧ ಆಯಾ ಸ್ಥಳಿಯ ಆಡಳಿತ ಮಂಡಳಿಗಳು ಮತ್ತು ರಸ್ತೆ ಅಭಿವೃದ್ಧಿ ಪ್ರಾಧಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹವ್ಯಾಹತವಾಗಿ ಮುಂದುವರೆದಿದೆ.

ಅಲ್ಲದೇ ರಾತ್ರಿ ವೇಳೆ ಎಣ್ಣೆ ಪಾರ್ಟಿ ಮಾಡುವವರು ಅಂಗಡಿ& ಹೋಟೆಲ್​ಗಳಿಂದ ಪಾರ್ಸಲ್​ ತರುವ ಪ್ಲಾಸ್ಟಿಕ್​ ಕವರ್​ಗಳನ್ನು ರಸ್ತೆಯ ಪಕ್ಕದಲ್ಲಿಯೇ ಬಿಸಾಡುತ್ತಿದ್ದಾರೆ. ಪಾರ್ಟಿ ಮುಗಿದ ನಂತರ ಮದ್ಯದ ಬಾಟಲುಗಳನ್ನೂ ಸಹ ಅಲ್ಲಿಯೇ ಎಸೆಯುತ್ತಿರುವುದು ಬಹುದೊಡ್ಡ ದುರಂತವಾಗಿ ಸಂಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಪಕ್ಕ ತ್ಯಾಜ್ಯದ ರಾಶಿಗಳು ಗುಡ್ಡೆಗಳಾಗಿ ಬಿದ್ದಿವೆ. ಗ್ರಾಮೀಣ ಭಾಗದಿಂದ ದನ ಮೇಯಿಸಲು ಬರುವವರು ರಸ್ತೆಯ ಪಕ್ಕ ಹೆಚ್ಚಾಗಿ ಹುಲ್ಲು ಬೆಳೆದಿರುತ್ತದೆ ಎಂದು ದನ&ಕರಗಳನ್ನು ಮೇಯಲು ಬಿಡುತ್ತಾರೆ. ಆದ್ದರಿಂದ ಕಸದ ರಾಶಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್​ ಕವರ್​ಗಳನ್ನು ದನಗಳು ತಿನ್ನುತ್ತಿವೆ.

ರಾತ್ರಿ ರಸ್ತೆ ಹತ್ತಿರ ಬರುವ ಕಾಡು ಪ್ರಾಣಿಗಳೂ ಸಹ ತ್ಯಾಜ್ಯದಲ್ಲಿ ಬಿದ್ದಿರುವ ಪ್ಲಾಸ್ಟಿಕ್​ನ್ನು ಸೇವಿಸುತ್ತಿದ್ದು, ರಸ್ತೆಯ ಪಕ್ಕದಲ್ಲಿ ಬಿದ್ದಿರುವ ತ್ಯಾಜ್ಯದ ಗುಡ್ಡೆಗಳಿಂದ ದುರ್ವಾಸನೆ ಬರುವಂತಾಗಿದೆ. ಸುತ್ತಮುತ್ತಲಿನ ಪರಿಸರವೂ ಹದಗೆಡುತ್ತಿದ್ದು, ರಸ್ತೆ ಪಕ್ಕದಲ್ಲಿರುವ ಗ್ರಾಮಸ್ಥರು ಪ್ರತಿದಿನ ಇದರಿಂದ ಬರುವ ದುರ್ವಾಸನೆ ಸೇವಿಸುವಂತಾಗಿದೆ. ಇಂತಹ ಕೆಟ್ಟ ವಾತಾವರಣದಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಜಲಮೂಲಕ್ಕೂ ಕಂಟಕ : ರಸ್ತೆಯ ಪಕ್ಕ ಎಸೆಯುತ್ತಿರುವ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್​ಗಳು ನೀರಿನಲ್ಲಿ ಬೆರೆತು ರೈತರ ಜಮೀನುಗಳಿಗೂ ಸೇರುವಂತಾಗಿದೆ. ಇದರಿಂದ ಮಣ್ಣಿನ ಲವತ್ತತ್ತೆಯ ಮೇಲೆ ಪರಿಣಾಮ ಬೀದ್ದು ಬೆಳೆ ನಾಶವಾಗುತ್ತವೆ. ಅಧಿಕ ಮಳೆಯಾದಾಗ ತ್ಯಾಜ್ಯ ರೈತರ ಜಮೀನು ಮತ್ತು ಕೆರೆಗಳಲ್ಲಿ ಬೇರೆತು ನೀರು ವಿಷಪೂರಿತ ಆಗುವ ಸಾಧ್ಯತೆ ಇದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಪ್ಲಾಸ್ಟಿಕ್​ಅನ್ನು ಸರ್ಕಾರ ನಿಷೇಧಿಸಬೇಕು. ತಯಾರಿಕೆ ಹಿಂದೆ ದೊಡ್ಡ ಲಾಬಿಯೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕಾಗಿದೆ. ಕೆಲವರು ಅರಿವಿಲ್ಲದೆ ರಸ್ತೆಯ ಪಕ್ಕ ಮದ್ಯಪಾನ ಮಾಡಿ ಪರಿಸರ ಹಾಳು ಮಾಡುತ್ತಿದ್ದಾರೆ. ಇದರ ಜತೆಗೆ ಹೋಟೆಲ್​, ಆಸ್ಪತ್ರೆ ಮತ್ತು ಕಾರ್ಖಾನೆಗಳಿಂದ ಹೊರ ಬೀಳುವ ತ್ಯಾಜ್ಯವನ್ನು ರಸ್ತೆ ಪಕ್ಕ ಎಸೆಯುವುದನ್ನು ನಿಲ್ಲಿಸಬೇಕು. ಮೈಕ್ರೋ ಪ್ಲಾಸ್ಟಿಕ್​ಗಳು ದನ&ಕರುಗಳ ಹೊಟ್ಟೆ ಸೇರಿ ಉತ್ಪತ್ತಿಯಾಗುವ ಹಾಲಿನಲ್ಲಿಯೂ ವಿಷಕಾರಿ ಪ್ಲಾಸ್ಟಿಕ್​ ಸೇರುತ್ತಿದೆ. ಹಾಲು ಮನುಷ್ಯನ ಹೊಟ್ಟೆಗೆ ಸೇರಿ ಕ್ಯಾನ್ಸರ್​ ಬರುವ ಸಾಧ್ಯತೆಗಳಿವೆ. - ಎಚ್​.ಎ. ಪುರುಷೋತ್ತಮರಾವ್​ ಪರಿಸರ ತಜ್ಞ ರಸ್ತೆಯ ಪಕ್ಕ ತ್ಯಾಜ್ಯ ಸುರಿಯದಂತೆ ಕ್ರಮವಹಿಸಲು ನಗರಸಭೆ, ಪುರಸಭೆ, ಗ್ರಾಪಂಗೆ ಪತ್ರ ಬರೆಯಲಾಗಿದೆ. ಜತೆಗೆ ಈಗಾಗಲೇ ಬಿದ್ದಿರುವ ತ್ಯಾಜ್ಯ ವಿಲೇವಾರಿ ಮಾಡುವಂತೆಯೂ ಸೂಚನೆ ನೀಡಲಾಗಿದೆ. ತ್ಯಾಜ್ಯ ಸುರಿಯುವುದರಿಂದ ಪರಿಸರಕ್ಕೂ ಹಾನಿಯುಂಟಾಗುತ್ತದೆ. ಸಾರ್ವಜನಿಕರಿಗೂ ಈ ಬಗ್ಗೆ ಅರಿವು ಅವಶ್ಯ. ಪರಿಸರ ಕಾಪಾಡುವ ಬಗ್ಗೆ ಇಲಾಖೆಯಿಂದ ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. - ರಾಜು ಪರಿಸರ ಇಲಾಖೆ ಅಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net