

ಬ್ಯಾಡಗಿ: ತಾಲೂಕು ಕಾನೂನುಗಳ ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜು. 13 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ ಹಿರೇಕುಡಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸಬೇಕು. ನ್ಯಾಯಾಲಯದಲ್ಲಿ ಸಣ್ಣಪುಟ್ಟ ಪ್ರಕರಣಗಳಿಗೆ ಸಮಯ ಹಾಗೂ ಹಣ ವ್ಯರ್ಥವಾಗಬಾರದು ಎನ್ನುವ ಉದ್ದೇಶದಿಂದ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಅದಾಲತ್ ಆಯೋಜಿಸಲಾಗಿದೆ. ವಾರ್ಷಿಕವಾಗಿ ಮೂರು ತಿಂಗಳಿಗೊಮ್ಮೆ ಈ ಕಾರ್ಯಕ್ರಮ ಜರುಗಲಿದ್ದು, ಪ್ರಸಕ್ತ ಸಾಲಿನ ಮೊದಲ ಹಂತದ ಲೋಕ ಅದಾಲತ್ ಮಾರ್ಚ್‌ನಲ್ಲಿ ಮುಗಿದಿದೆ. ಎರಡನೇ ಬಾರಿಗೆ ಜು. 13 ರಂದು ಏರ್ಪಡಿಸಲಾಗಿದೆ ಎಂದರು.
ಸಾರ್ವಜನಿಕರು ಅಪಘಾತ ಪ್ರಕರಣ, ಮನೆ, ಇತರ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ಸಮಸ್ಯೆ, ಚೆಕ್ ಪ್ರಕರಣ, ಬ್ಯಾಂಕ್‌ಗಳ ವ್ಯವಹಾರದ ಸಮಸ್ಯೆ, ಭೂಸ್ವಾಧೀನ ಪ್ರಕರಣ ಸಂಬಂಧಿಸಿದಂತೆ ಅದಾಲತ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಇತ್ಯರ್ಥಪಡಿಸಲಾಗುವುದು ಎಂದರು.
ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಹೆಚ್ಚಿನ ಮಾಹಿತಿಗಾಗಿ ನ್ಯಾಯಾಲಯ ಆವರಣದಲ್ಲಿರುವ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯಾಲಯ ಸಂಪರ್ಕಿಸಬಹುದು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ, ಉಪಾಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯದರ್ಶಿ ಎಂ.ಪಿ. ಹಂಜಗಿ, ಪ್ರವೀಣ ಎನ್. ಇದ್ದರು.