

ಮಂಡ್ಯ: ಸ್ವದೇಶಿ ಉಡುಪುಗಳು ಹೆಚ್ಚು ಉತ್ಪಾದನೆಯಾಗಬೇಕು. ಆಮದು ಕಡಿಮೆಯಾಗಿ ರಪ್ತು ಹೆಚ್ಚಾಗಬೇಕು. ಪ್ರತಿಯೊಂದು ಮನೆಯಲ್ಲೂ ಕೈಮಗ್ಗ ನೇಕಾರರು ಇರಬೇಕು. ಇದರಿಂದ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಲಿಂಗಯ್ಯ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಮಾತನಾಡಿದರು. ಮಳವಳ್ಳಿ ತಾಲೂಕಿನ ತಳಗವಾದಿ, ಗುಂಡಾಪುರ, ಪಾಂಡವಪುರ ತಾಲೂಕಿನ ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು, ಕೊರಟಿಗೆರೆ, ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ, ಗಾಮನಹಳ್ಳಿ, ಮದ್ದೂರು ತಾಲೂಕಿನ ಅಡಗನಹಳ್ಳಿ, ಮಂಡ್ಯ ತಾಲೂಕಿನ ಸೂನಗಹಳ್ಳಿ, ಇಂಡುವಾಳು ಗ್ರಾಮದಲ್ಲಿ ಜನರು ಕೈಮಗ್ಗದ ಮೇಲೆ ಅವಲಂಬಿತರಾಗಿ ಕಾರ್ಯನಿರತರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸುಮಾರು 150 ಕೈಮಗ್ಗ ನೇಕಾರರು, ಕೈಮಗ್ಗ ನೇಕಾರರು ಸಹಕಾರ ಸಂಘಗಳಲ್ಲಿ ಹಾಗೂ ಕೆಎಚ್‌ಡಿಸಿ ಉಪಕೇಂದ್ರಗಳಲ್ಲಿ ಕಾರ್ಯ ನಿರತರಾಗಿದ್ದಾರೆ. 9 ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ 2,374 ಜನರು ನೋಂದಾಯಿತ ಸದಸ್ಯರಾಗಿದ್ದಾರೆ. ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಕೆ ಮಾಡಿದರೆ ಸ್ವಾತಂತ್ರ್ಯಕ್ಕೆ ಗೌರವ ಹೆಚ್ಚಾಗುತ್ತದೆ. ಉದ್ದೇಶಗೋಸ್ಕರ ನಮ್ಮ ಗಾಂಧೀಜಿ ಅವರು ದೇಶದ ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ಚರಕವನ್ನು ಐಕ್ಯತೆಯಾಗಿ ಇಟ್ಟಿರುತ್ತಾರೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಗಂಗಯ್ಯ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕ ದೀಪಕ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಬಿ.ವಿ.ಹರ್ಷಿತಾ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಕೆ.ವಾಣಿ, ಆರ್‌ಸಿಟಿ ನಿರ್ದೇಶಕ ವಿವೇಕ್, ಮುಡಾ ಮಾಜಿ ಅಧ್ಯಕ್ಷ ಬಸವೇಗೌಡ ಇತರರಿದ್ದರು.