

ಶಿವಮೊಗ್ಗ: ಮುಂಬರುವ ಶಿವಮೊಗ್ಗ ಪಾಲಿಕೆ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗದಿಂದ ಎಲ್ಲ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಯಾವುದೇ ಮೀಸಲಾತಿ ಘೋಷಣೆಯಾಗಲಿ, ಅದಕ್ಕೆ ತಕ್ಕಂತೆ ರಾಷ್ಟ್ರಭಕ್ತರ ಬಳಗದಿಂದ ಎಲ್ಲ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಹಿಂದುತ್ವ ಒಪ್ಪಿಕೊಂಡವರಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಸ್ಲಿಮರಿಗೆ ರಾಷ್ಟ್ರಭಕ್ತರ ಬಳಗದ ಟಿಕೆಟ್ ನೀಡುವುದಿಲ್ಲ. ಆದರೆ ನಿಜವಾಗಿಯೂ ಅವರು ರಾಷ್ಟ್ರಭಕ್ತರೆಂದು ಕಂಡುಬಂದರೆ ಯಾವುದೇ ಧರ್ಮದವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಚಿಹ್ನೆ ಗೊಂದಲ ಉಂಟಾಗಬಹುದು. ಒಂದೇ ರೀತಿ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು. ಸಾಧ್ಯವಾಗದಿದ್ದರೆ ಅಭ್ಯರ್ಥಿಗಳು ತಮಗೆ ಸಿಕ್ಕ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಾರೆ. ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಜನರು ಒತ್ತು ನೀಡುತ್ತಾರೆ. ಹೀಗಾಗಿ ರಾಷ್ಟ್ರಭಕ್ತರ ಬಳಗದ ಅನೇಕ ಮಂದಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಶಿವಮೊಗ್ಗ ಪಾಲಿಕೆಗೆ ಕೂಡಲೇ ಚುನಾವಣೆ ಘೋಷಿಸಬೇಕು. ಚುನಾವಣಾ ಆಯೋಗ ಕೂಡ ಇನ್ನು 8 ದಿನದಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದೆ. ಮೀಸಲಾತಿ ಮತ್ತು ವಾರ್ಡ್‌ಗಳ ಹೆಚ್ಚಳದ ಕಾರಣ ನೀಡಿ ಚುನಾವಣೆ ಮುಂದೂಡಬಾರದು ಎಂದು ಒತ್ತಾಯಿಸಿದರು.
ಪಾಲಿಕೆ ಮಾಜಿ ಉಪಮೇಯರ್ ಗನ್ನಿ ಶಂಕರ್, ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಕಾಚಿನಕಟ್ಟೆ ಸತ್ಯನಾರಾಯಣ್, ಮೋಹನ್ ಜಾಧವ್, ಶ್ರೀಕಾಂತ್, ಶಿವಾಜಿ, ಚಿದಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.