

ಯಾದಗಿರಿ: ಅಲ್ಪ ಸಂಖ್ಯಾತರ ಏಳಿಗೆಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್. ಶ್ರೀಧರ ಕರೆ ನೀಡಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಅಲ್ಪಸಂಖ್ಯಾತರ ಕಲ್ಯಾಣ ದಿನ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು, ಶಾಲಾ ಶಿಕ್ಷಣ ಸುಧಾರಣೆ, ಮದರಾಸಗಳ ಆಧುನಿಕ ಶಿಕ್ಷಣ, ಅಲ್ಪಸಂಖ್ಯಾತ ವಿದ್ಯಾಥರ್ಿಗಳಿಗೆ ಶಿಷ್ಯವೇತನ, ಮೌಲಾನಾ ಆಜಾದ್ ಶಿಕ್ಷಣ ಸಂಸ್ಥೆ ಮೂಲಕ ಶೈಕ್ಷಣಿಕ ಮೂಲಭೂತ ಸೌಕರ್ಯ ಸುಧಾರಿಸುವುದು, ಬಡವರಿಗೆ ಸ್ವಂತ ಉದ್ಯೋಗ, ತಾಂತ್ರಿಕ ತರಬೇತಿ ಮೂಲಕ ಕೌಶಲ್ಯ ಸುಧಾರಣೆ, ಸಾಲಸೌಲಭ್ಯ ಸೇರಿದಂತೆ ನಾನಾ ಅಂಶಗಳು ಒಳಗೊಂಡಿವೆ.
ಅದರಂತೆ ಜಿಲ್ಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ. ಸಾಲಮಂಟಪಿ, ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಸ್.ಪಿ. ನಾಡೇಕರ್, ನಾಗರಾಜ ಯರಗೋಳ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಜು ಇದ್ದರು. ಸಂಗೀತಾ ಮಾಡ್ಯಾಳ ಸ್ವಾಗತಿಸಿದರು, ಮಾಶಾಬಿ ಸನದಿ ವಂದಿಸಿದರು ಹಾಗೂ ಜಟ್ಟೆಪ್ಪ ನಿರೂಪಿಸಿದರು.