ದೈತ್ಯ ಪ್ರತಿಭೆ ರಾಷ್ಟ್ರಕವಿ ಕುವೆಂಪು: ಅಲಯನ್ಸ್ ಸಂಸ್ಥೆ ಪ್ರಾಂತಪಾಲ ಕೆ.ಟಿ.ಹನುಮಂತು ಬಣ್ಣನೆ

Rashtrakavi Kumpu birthday Mandya
Published on

ಮಂಡ್ಯ: ಇಪ್ಪತ್ತನೆಯ ಶತಮಾತನದ ದೈತ್ಯ ಪ್ರತಿಭೆ ರಾಷ್ಟ್ರಕವಿ ಕುವೆಂಪು ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ರೈತ ಸಭಾಂಗಣ ಆವರಣಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆ ಬಳಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಮಂಡ್ಯ, ನಂಜಮ್ಮ ಮೋಟೆಗೌಡ ಚಾರಿಬಲ್ ಟ್ರಸ್ಟ್ ಕೊಪ್ಪ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ ಹಾಗೂ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಲೋಕದ ಮೂಲಕ ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರು ದೈತ್ಯ ಪ್ರತಿಭೆಯಾಗಿದ್ದರು. ಸಾರಸತ್ವ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಕೀರ್ತಿ, ಶ್ರೇಯಸ್ಸು ಅವರಿಗೆ ಲಭ್ಯವಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ, ಮೊದಲ ಪಂಪ ಪ್ರಶಸ್ತಿ, ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರತ್ನ ಪುರಸ್ಕಾರ ಪಡೆದು, ಭಾರತ ಸರ್ಕಾರದಿಂದ ಪದ್ಮವಿಭೂಷಣ, ಪದ್ಮಭೂಷಣ, ಗೌರವ ಡಾಕ್ಟರೇಟ್, 2ನೇ ರಾಷ್ಟ್ರಕವಿ ಬಿರುದುಗಳನ್ನು ತಂದುಕೊಟ್ಟವರಾಗಿದ್ದಾರೆ ಎಂದು ಸ್ಮರಿಸಿದರು.

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಗುವುದಿಲ್ಲ. ಇಂತಹ ಅಪರೂಪದ ಕವಿ ಕುವೆಂಪು ಆಗಿದ್ದಾರೆ ಎನ್ನುವುದು ಅಭಿಮಾನದ ಸಂಗತಿ ಎಂದರು.

ಶ್ರೀರಾಮಾಯಣ ದರ್ಶನಂ ಮಹಾಕೃತಿಯಲ್ಲಿ ಈ ಕಾಲಘಟ್ಟದ ಸನ್ನಿವೇಶಗಳನ್ನು ಕಟ್ಟಿಕೊಟ್ಟು ಹೊಸ ತಲೆಮಾರಿಗೂ ಆಲೋಚನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಾದಂಬರಿಗಳ ಮೂಲಕ ಹೊಸತನ, ಪ್ರಕೃತಿ, ಜನಜೀವನ, ಸಮಸ್ಯೆಗಳು, ಸವಾಲುಗಳಿಗೆ ಉತ್ತರಗಳನ್ನು ಬಿತ್ತರಿಸಿದ್ದಾರೆ ಎಂದು ಹೇಳಿದರು.

ಸಾಹಿತಿ ಹನಸೋಗೆ ಸೋಮಶೇಖರ್ ಮಾತನಾಡಿ, ಕುವೆಂಪು ಎಲ್ಲ ಬರಹಗಾರರು, ಕವಿಗಳು, ಲೇಖಕರಿಗೆ ಸ್ಫೂರ್ತಿ, ಯುವಜನರಿಗೆ ಚೇತನವಾಗಿ ಕಾಡುತ್ತಾರೆ. ಈ ನೆಲದ ತಾತ್ವಿಕ ಸಂಘರ್ಷಗಳಿಂದ ಏಳುಬೀಳುಗಳಿಂದ ವ್ಯತ್ಯಾಸವಾಗುತ್ತಿದ್ದರೂ ಎಲ್ಲವನ್ನೂ ಮೀರಿ ಬೆಳೆದು ಮಹಾಕವಿಯಾದರು ಎಂದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಅಲಯನ್ಸ್ ಸಂಸ್ಥೆ ಜಿಲ್ಲಾ ಉಪ ಪ್ರಾಂತಪಾಲ ಶಶಿಧರ್ ಈಚೆಗೆರೆ, ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದಶೇಖರ್, ಗಾಯಕರಾದ ಸಂತೆಕಸಲಗೆರೆ ಬಸವರಾಜು, ವೈರಮುಡಿ ಮತ್ತಿತರರು ಹಾಜರಿದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಕುರಿತು ಗೀತೆ ಬರೆದ ಸಾಹಿತಿ ಹನಸೋಗೆ ಸೋಮಶೇಖರ್ ಅವರಿಗೆ 2024ರ ವಿಶ್ವ ಮಾನವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net