ಅಪರೂಪದ ಬಿಳಿ ಚೇಕಡಿ ಹಕ್ಕಿ ಪತ್ತೆ

LXR bird
Published on

ಲಕ್ಷ್ಮೇಶ್ವರ: ಕಪ್ಪತ್ತಗುಡ್ಡ ಪ್ರದೇಶ ವ್ಯಾಪ್ತಿಯ ಶಿರಹಟ್ಟಿ ತಾಲೂಕಿನ ಕಡಕೋಳದ ಹತ್ತಿರ ಅಪರೂಪದ ಬಿಳಿ ಚೇಕಡಿ( ವೈಟ್ ನೇಪ್ಡ್ ಟಿಟ್) ಹಕ್ಕಿ ಕಾಣಿಸಿಕೊಂಡಿರುವ ಬಗ್ಗೆ ಜೀವ ವೈವಿಧ್ಯ ವಿಜ್ಞಾನಿ ಮಂಜುನಾಥ ನಾಯಕ ತಿಳಿಸಿದ್ದಾರೆ.

ಭಾರತದಲ್ಲಿ ಬಿಳಿ ರೆಕ್ಕೆಯ ಚೇಕಡಿ ಹಕ್ಕಿಯು ರಾಜಸ್ಥಾನ, ಗುಜರಾತ, ದಕ್ಷಿಣ-ಆಂಧ್ರಪ್ರದೇಶದ ಪೂರ್ವಘಟ್ಟ, ಉತ್ತರ ತಮಿಳುನಾಡು, ಹರಿಯಾಣ ಮತ್ತು ದಕ್ಷಿಣ ಕರ್ನಾಟಕದ ಕಾವೇರಿ ವನ್ಯಜೀವಿ ಧಾಮ ಸೇರಿ ದೇಶದ 6 ರಾಜ್ಯಗಳ ಕೆಲವೇ ಸೀಮಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇದೀಗ ಕಪ್ಪತ್ತಗುಡ್ಡ ಸೆರಗಿನ ಕಡಗೋಳ ಗ್ರಾಮದ ಕುರುಚಲು ಪ್ರದೇಶದಲ್ಲಿ ಕಂಡು ಬಂದಿರುವುದು ಇಲ್ಲಿನ ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಪ್ಯಾರಿಡೆ ಕುಟುಂಬಕ್ಕೆ ಸೇರಿದ ಬಿಳಿ ರೆಕ್ಕೆಯ ಹಕ್ಕಿಯು 12-13ಸೆಂ.ಮೀ. ಮಧ್ಯಮ ಗಾತ್ರ, ನಾಚಿಕೆ ಸ್ವಭಾವದ ಈ ಹಕ್ಕಿ ಕುರುಚಲು ಕಾಡಿನ ಮುಳ್ಳಿನ ಮರಗಳ ಸಸ್ಯವರ್ಗವಿರುವ ಜಾಗವನ್ನು ಇಷ್ಟ ಪಡುತ್ತವೆ. ಈ ಹಕ್ಕಿಯು ಹೆಚ್ಚಾಗಿ ಕೀಟಗಳನ್ನು ಸೇವಿಸುತ್ತವೆ ಮತ್ತು ಕರಿಯುಪ್ಪಿ (ಕೆಪರ ಬೆರ್ರಿ) ಸಸ್ಯದ ಹೂವಿನ ಮಕರಂದ ಹೀರುತ್ತವೆ.

ಹಕ್ಕಿಯ ಅಳಿವಿನಂಚಿಗೆ ಕಾರಣ

ನಗರೀಕರಣ, ತಾಂತ್ರೀಕರಣದಿಂದ ಅವಾಸ ಸ್ಥಾನ ನಾಶವಾಗಿ ಈ ಹಕ್ಕಿಗಳ ಸಂಖ್ಯೆ ಕ್ಷೀಣವಾಗುತ್ತಿದೆ. ಚೇಕಡಿಯು ಕಂಚುಕುಟ್ರ ಹಕ್ಕಿಗಳು ಮತ್ತು ಮರ ಕುಟುಕ ಹಕ್ಕಿಗಳು ಕೊರೆದ ಕುಳಿಗಳಲ್ಲಿ (ಕ್ಯಾವಿಟಿ) ಗೂಡು ನಿರ್ಮಿಸುತ್ತವೆ. ಸ್ವತಃ ಗೂಡು ನಿರ್ಮಿಸಲು ಗುಗ್ಗಳ ಧೂಪದ ಮರ (ಇಂಡಿಯನ್ ಫ್ರಾಕಿನ್ಸೆನ್ಸ್), ಕರಿಗೋಣಿ ಮರ (ಟೂತ್ ಬ್ರಷ್ ಟ್ರೀ), ಕರಿಜಾಲಿ (ಅರೇಬಿಕ್ ಗಮ್ ಟ್ರೀ) ಮರಗಳಲ್ಲಿನ ಕುಳಿ(ಕ್ಯಾವಿಟಿ )ಗಳನ್ನು ಮಾತ್ರ ಬಳಸಿಕೊಳ್ಳುತ್ತವೆ. ಗೂಡು ನಿರ್ಮಿಸಲು ಬೇಕಾಗಿರುವ ಈ ಮರಗಳನ್ನು ಔಷಧ, ಉರುವಲು, ಇದ್ದಲು, ಅಭಿವೃದ್ಧಿ ಕಾಮಗಾರಿಗಳ ಉದ್ದೇಶಕ್ಕಾಗಿ ಕತ್ತರಿಸುವುದು ಈ ಹಕ್ಕಿಗಳ ಸಂಖ್ಯೆ ಕ್ಷೀಣಿಸಲು ಪ್ರಮುಖ ಕಾರಣ.

ಬಿಳಿ ರೆಕ್ಕೆಯ ಚೇಕಡಿ ಹಕ್ಕಿಯು ಸ್ಥಳೀಯವಾಗಿ ವಲಸೆ ಹೋಗುತ್ತವೆ. ವೈಟ್-ನೇಪ್ಡ್ ಟಿಟ್ ಅಪರೂಪದ ಪಕ್ಷಿ ಪ್ರಭೇದವಾಗಿದೆ. ಈ ಹಕ್ಕಿಯ ಜಾತಿಯನ್ನು ಸಂರಕ್ಷಿಸಲು ಅದರ ನೈಸರ್ಗಿಕ ಆವಾಸ ಸ್ಥಾನವನ್ನು ರಕ್ಷಿಸುವುದು ಮುಖ್ಯವಾಗಿದೆ. ಈ ವಿರಳ ಹಕ್ಕಿ ಕಪ್ಪತ್ತಗುಡ್ಡದಲ್ಲಿ ಇಲ್ಲಿ ಪತ್ತೆಯಾಗಿದ್ದು ಪಕ್ಷಿ ಪ್ರೇಮಿಗಳಿಗೆ ಸಂತಸ ಉಂಟು ಮಾಡಿದೆ. ಸ್ಕಂದ ಎಸ್.ಎನ್. ಪಕ್ಷಿ ತಜ್ಞರು ಮತ್ತು ಕಾಂತರಾಜು ಡಿ., ವನ್ಯಜೀವಿ ಛಾಯಾಗ್ರಾಹಕ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net