

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸತ್ತೂರಿನ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಪ್ರಥಮ ಬಾರಿಗೆ ಮೈಕ್ರಾ ಲೀಡ್ ಲೆಸ್ ಪೇಸ್ ಮೇಕರ್ ಅನ್ನು ಯಶಸ್ವಿಯಾಗಿ ಅಳವಡಿಸಿ ದಾಖಲೆ ಸೃಷ್ಟಿಸಿದೆ.
ಬೆಂಗಳೂರಿನ 79ವರ್ಷದ ಉದ್ಯಮಿಯೊಬ್ಬರು ಎವಿ (ಎಟ್ರಿಯೊವೆಂಟ್ರಿಕ್ಯುಲರ್) ಬ್ಲಾಕ್ನಿಂದ ಉಂಟಾದ ಬ್ರೆಡಿಕಾಡಿರ್ಯಾ (ಅಸಹಜ ನಿಧಾನ ಹೃದಯ ಬಡಿತ)ದಿಂದ ಅರಿವಿಲ್ಲದೆ ಕುಸಿದು ಬೀಳುವ ಆತಂಕಕಾರಿ ಸಮಸ್ಯೆಗೆ ತುತ್ತಾಗುತ್ತಿದ್ದರು. ಅವರಿಗೆ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಯಶಸ್ವಿಯಾಗಿ ಪೇಸ್ ಮೇಕರ್ ಅಳವಡಿಸಿ ಸಮಸ್ಯೆಯಿಂದ ಪಾರಾಗುವಂತೆ ಮಾಡಿದೆ.
1 ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದ ರೋಗಿಗೆ ಸಂಪೂರ್ಣ ಹೃದಯ ಪರೀಕ್ಷೆ ನಡೆಸಿದಾಗ ರೋಗ ಪತ್ತೆಯಾಗಿದೆ. ನಂತರ ಮೈಕ್ರಾ ಲೀಡ್ ಲೆಸ್ ಪೇಸ್ ಮೇಕರ್ ಅಳವಡಿಸಲಾಗಿದೆ.
ಈ ಪೇಸ್ ಮೇಕರ್ ಸಣ್ಣ ಕ್ಯಾಪ್ಸೂಲ್ನಂತಹ ಸಾಧನ. ಸಾಂಪ್ರದಾಯಿಕ ಪೇಸ್ ಮೇಕರ್ಗಿಂತ ಶೇ. 93ರಷ್ಟು ಸಣ್ಣದಾಗಿದೆ. ಇದು ನಿಧಾನವಾದ ಹೃದಯ ಬಡಿತವನ್ನು ಎಂದಿನ ವೇಗಕ್ಕೆ ತರಲು ಬಳಸುವ ಅತ್ಯಾಧುನಿಕ ಸಾಧನ. ಚಿಕಿತ್ಸೆ ಮಾಡಿದ ಮರುದಿನವೇ ರೋಗಿಯನ್ನು ಆಸ್ಪತ್ರೆಯಿಂದ ಕಳುಹಿಸಿದ್ದು, ತೊಂದರೆಯಿಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಚಿಕಿತ್ಸೆಗೆ ಎದೆ ಭಾಗ ಅಥವಾ ಚರ್ಮ ಕತ್ತರಿಸುವ ಅಗತ್ಯವಿಲ್ಲ. ತೊಡೆ ಭಾಗದಲ್ಲಿ ಸಣ್ಣ ಚುಚ್ಚುವಿಕೆ ಮೂಲಕ ಕ್ಯಾಥೆಟರ್ ಬಳಸಿ ಪೇಸ್ ಮೇಕರ್ ಅಳವಡಿಸಲಾಗುತ್ತದೆ. ಇದರಿಂದ ಸಮಸ್ಯೆಗಳ ಅಪಾಯ ಕಡಿಮೆ ಮಾಡುವುದಲ್ಲದೆ, ರೋಗಿ ಬೇಗ ಚೇತರಿಸುವಂತೆ ಮಾಡುತ್ತದೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಹಿರಿಯ ಹೃದರೋಗ ತಜ್ಞ ಡಾ. ರಘು ಪ್ರಸಾದ ಎಸ್. ತಿಳಿಸಿದ್ದಾರೆ.
-