

ಸಿಂಧನೂರು: ನಗರದ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದವನಿಗೆ ಇಲ್ಲಿನ ನ್ಯಾಯಾಲಯದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಸೋಮವಾರ ಜೀವಾವಧಿ ಶಿಕ್ಷೆ ಹಾಗೂ 3.15 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಬಾಗೋಡಿ ಗ್ರಾಮದ ಮಹ್ಮದ್ ಚಾಂದ್‌ಪಾಷಾ ಶಿಕ್ಷೆಗೆ ಗುರಿಯಾದವ. 2021ರ ಜು.27 ರಂದು ಬೆಳಗ್ಗೆ 8.30 ಗಂಟೆಗೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ನಂತರ ಬೆದರಿಸಿ 9 ಲಕ್ಷ ರೂ. ನೀಡುವಂತೆ ಕಿರುಕುಳ ನೀಡಿದ್ದನು.
ಸ್ಥಳೀಯ ಠಾಣೆಯಲ್ಲಿ ಚಾಂದ್‌ಪಾಷಾ ವಿರುದ್ಧ ಮಹಿಳೆ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಆಗಿನ ತನಿಖಾಧಿಕಾರಿ ಲಿಂಗಪ್ಪ ಎಂ.ಆರ್., ಸಿಪಿಐ ಗುರುರಾಜ ಕಟ್ಟಿಮನಿ ಕೋರ್ಟ್‌ಗೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸೋಮವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಅಪರಾಧಿ ಚಾಂದ್‌ಪಾಷಾಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 3.15 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದರು. ಸರ್ಕಾರದ ಪರವಾಗಿ ಆರ್.ಎ.ಗಡ್ಕರಿ ಮತ್ತು ಸರ್ಕಾರಿ ಅಭಿಯೋಜಕ ಮಂಜುನಾಥ ಬೇರ‌್ಗಿ ವಾದ ಮಂಡಿಸಿದ್ದರು.