

ಕೊಳ್ಳೇಗಾಲ: ಇನ್ಸ್ಟಾ ಗ್ರಾಮ್‌ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡು ಪುಸಲಾಯಿಸಿ ತಾಲೂಕಿನ ಕುರಬನ ಕಟ್ಟೆಯ ಬಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ದೂರು ಬಂದ ಕೆಲವೇ ಗಂಟೆಯಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕುಣಗಳ್ಳಿ ಗ್ರಾಮದ ಗೋಪಾಲ್ ಅಲಿಯಾಸ್ ಡಿಚ್ಚಿ ಕೃಷ್ಣ ಬಂಧಿತ ಆರೋಪಿ. ಮಂಡ್ಯ ಮೂಲದ ಗ್ರಾಮದವೊಂದರ 10 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಗೋಪಾಲ್ ಇನ್ಸ್ಟಾ ಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ನಂತರ ನಿರಂತರ ಸಂಪರ್ಕದಲ್ಲಿದ್ದು ಮೂರ್ನಾಲ್ಕು ತಿಂಗಳ ಹಿಂದೆ ಆಕೆಯನ್ನು ಕೊಳ್ಳೇಗಾಲದ ಕುರುಬನ ಕಟ್ಟೆಗೆ ದೇವರ ದರ್ಶನಕ್ಕೆಂದು ಕರೆದುಕೊಂಡು ಬಂದು ಆಕೆಯ ಒಪ್ಪಿಗೆ ಇಲ್ಲದೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆಕೆ ಒಪ್ಪದಿದ್ದಾಗ ಏನೇನೊ ಹೇಳಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ.
ವಿದ್ಯಾರ್ಥಿನಿಗೆ ಆರೋಗ್ಯದಲ್ಲಿ ಏರು ಪೇರಾದ ಕಾರಣ ಪಾಲಕರು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಗ 3 ತಿಂಗಳ ಗರ್ಭಿಣಿಯಾಗಿರುವುದು ತಿಳಿದಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಥಳಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಮಾಹಿತಿ ನೀಡಿದ್ದರು. ನಂತರ ಇಲಾಖೆಯ ಅಧಿಕಾರಿಗಳು ಅಪ್ರಾಪ್ತೆಯನ್ನು ಕೌನ್ಸೆಲಿಂಗ್ ನಡೆಸಿ ನಡೆದಿರುವ ಘಟನೆ ಬಗ್ಗೆ ಸಂತ್ರಸ್ತೆಯಿಂದ ಹೇಳಿಕೆ ಪಡೆದು ಜೂ.12ರಂದು ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಮದ್ದೂರು ಠಾಣೆ ಪೊಲೀಸರು, ನಂತರ ಪ್ರಕರಣವನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಮತ್ತು ತಂಡ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.