ಅನುಮಾನಕ್ಕೆ ತೆರೆ ಎಳೆಯಲು ಬೇಕಿದೆ ರಾಪಿಡ್ ಟೆಸ್ಟ್

rapid test new
Published on

ವೇಣುವಿನೋದ ಕೆ.ಎಸ್.ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಮೂಲದ ಪತ್ತೆ ಬಗ್ಗೆ ದ.ಕ ಜಿಲ್ಲಾಡಳಿತ ಹಾಗೂ ನಾಗರಿಕರು ತಲೆಕೆಡಿಸಿಕೊಳ್ಳುತ್ತಿರುವಾಗಲೇ ದ.ಕ ಜಿಲ್ಲೆಯಲ್ಲಿ ಏಕಾಏಕಿಯಾಗಿ 16 ಹೊಸ ಪ್ರಕರಣಗಳು ದಾಖಲಾಗಿವೆ.

ಮುಂದೆ ಹಲವು ಸಾವಿರ ಮಂದಿ ಹೊರದೇಶಗಳಿಂದ, ಹೊರರಾಜ್ಯಗಳಿಂದ ಬರಲಿರುವುದು ಆತಂಕ ಹೆಚ್ಚಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಎದ್ದಿರುವ ಆತಂಕ, ಅನುಮಾನಗಳಿಗೆ ತೆರೆಯೆಳೆಯಬೇಕಾದರೆ ಆ್ಯಂಟಿಬಾಡಿ ಟೆಸ್ಟ್ ಅಥವಾ ರಾಪಿಡ್ ಟೆಸ್ಟ್ ಕಿಟ್ ತರುವುದು ಸೂಕ್ತ ಎನ್ನುವ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.

ಈಗ ಮಾಡಲಾಗುತ್ತಿರುವ ಪಿಸಿಆರ್ ಟೆಸ್ಟ್‌ನಲ್ಲಿ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ವೇಳೆ ದೇಹದಲ್ಲಿ ಕರೊನಾ ವೈರಸ್ ಇದ್ದರೆ ಮಾತ್ರವೇ ಪಾಸಿಟಿವ್ ಬರುತ್ತದೆ. ಒಂದು ವೇಳೆ ಹಿಂದೆಯೇ ಬಂದು ಗುಣವಾಗಿದ್ದರೆ ಅದರಲ್ಲಿ ಗೊತ್ತಾಗುವುದೇ ಇಲ್ಲ. ರಾಪಿಡ್ ಟೆಸ್ಟ್ ನೆರವಾಗುವುದು ಇಲ್ಲಿ. ರಾಪಿಡ್ ಟೆಸ್ಟ್‌ನಲ್ಲಿ ಜನರ ರಕ್ತದ ಮಾದರಿಯ ಪರೀಕ್ಷೆ ನಡೆಸಿ ರಕ್ತದಲ್ಲಿ ಪ್ರತಿಕಾಯ ಹೆಚ್ಚಾಗಿದೆಯೇ ಎಂದು ನೋಡುತ್ತಾರೆ. ಪ್ರತಿಕಾಯಗಳು ಹೆಚ್ಚಾಗಿದ್ದರೆ ವೈರಸ್ ಸೋಂಕು ಹಿಂದೆ ಆಗಿತ್ತು ಎನ್ನುವುದು ನಿಶ್ಚಿತಗೊಳ್ಳುತ್ತದೆ.

ದ.ಕ ಜಿಲ್ಲೆಯಲ್ಲಿ ಮೊದಲ ಕೆಲವು ಪ್ರಕರಣಗಳು ದುಬೈನಿಂದ ಮರಳಿ ಬಂದ ಪ್ರಯಾಣಿಕರು ಅಥವಾ ದೆಹಲಿಯ ತಬ್ಲಿಘಿ ಸಮಾವೇಶಕ್ಕೆ ಹೋದವರಿಗೆ ತಗಲಿದ್ದುದು ಹಾಗೂ ಕೇರಳಕ್ಕೆ ಹೋದ ಸಂಪರ್ಕದಿಂದ ಬಂದಿದ್ದು ವರದಿಯಾಗಿತ್ತು. ಆದರೆ ಜಿಲ್ಲೆಯಲ್ಲೇ ಇದ್ದವರಿಗೆ ತಗಲಿದ್ದ ಪ್ರಥಮ ಪ್ರಕರಣ ಬಂಟ್ವಾಳದ ಮಹಿಳೆ(ಪಿ-390)ಯದ್ದು. ಅವರು ಫಸ್ಟ್ ನ್ಯೂರೊಕ್ಕೆ ತಮ್ಮ ಅತ್ತೆಯನ್ನು ನೋಡಲು ಹೋದಾಗ ತಗಲಿತೇ ಅಥವಾ ಬಂಟ್ವಾಳದಿಂದಲೇ ಬಂದಿತ್ತೇ ಎನ್ನುವುದನ್ನು ಪತ್ತೆ ಮಾಡುವುದು ಸದ್ಯದ ಸವಾಲು.

ಈಗಾಗಲೇ ಈ ಕುರಿತ ಅಧ್ಯಯನಕ್ಕೆ ತಜ್ಞರ ಸಮಿತಿ ಹಲವರ ಪರೀಕ್ಷೆ ನಡೆಸಿದ್ದರೂ ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ.

ದ.ಕ ಜಿಲ್ಲೆಗೆ ಬಂಟ್ವಾಳದಿಂದ ಬಂದಿದೆಯೇ ಅಥವಾ ಫಸ್ಟ್ ನ್ಯೂರೋದಿಂದ ಸೋಂಕು ತಗಲಿದೆಯೇ ಎನ್ನುವುದಕ್ಕೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳ ಹಾಗೂ ಬಂಟ್ವಾಳದ ಆ ಭಾಗದ ಎಲ್ಲರ ರಾಪಿಡ್ ಟೆಸ್ಟ್ ನಡೆಸಬಹುದು ಎನ್ನುತ್ತಾರೆ ನಿವೃತ್ತ ವೈದ್ಯರೊಬ್ಬರು. ವೃಥಾ ಅವರಿವರ ಮೇಲೆ, ಆಸ್ಪತ್ರೆಗಳ ಮೇಲೆ ಶಂಕೆ ವ್ಯಕ್ತಪಡಿಸುವುದು, ಆಸ್ಪತ್ರೆಗಳನ್ನು ಗುರಿಯಾಗಿಸುವುದು ಈಗಿನ ಸಂದರ್ಭದಲ್ಲಿ ಸರಿಯಲ್ಲ. ಇದರಿಂದ ಯಾವುದೇ ಉದ್ದೇಶ ಈಡೇರಿಕೆಯಾಗದು, ಕರೊನಾ ಹತ್ತಿಕ್ಕುವುದೇ ಉದ್ದೇಶವಾಗಿರಬೇಕು ಎನ್ನುವುದು ಅವರ ಅಭಿಪ್ರಾಯ.

ರಾಪಿಡ್ ಟೆಸ್ಟ್ ಕಿಟ್ ಲಭ್ಯತೆ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ, ರಾಜ್ಯ ಮಟ್ಟದಲ್ಲಿ ಅದರ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿದೆ. - ಡಾ.ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net