

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿನ ಹಿಂಸಾಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಗುರುವಾರ ಸಂಜೆ ರಾಜಭವನ ಮುಂಭಾಗದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಿದರು.
ಯಾವುದೇ ರೀತಿಯ ಅನುಮತಿ ಪಡೆಯದೆ ಏಕಾಏಕಿ ಪ್ರತಿಭಟನೆಗೆ ಮುಂದಾದ ಸಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವ ವಿಧಾನಸೌಧ ಠಾಣೆ ಪೊಲೀಸರು 70 ಮಂದಿಯನ್ನು ಬಂಧಿಸಿದ್ದಾರೆ. ದೆಹಲಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಫ್ಐ ಸಂಘಟನೆಯ ನೂರಾರು ಸದಸ್ಯರು ಘೊಷಣೆ ಕೂಗಿದರು.
ದೆಹಲಿಯ ಹೋರಾಟಗಾರರ ಸಮಸ್ಯೆ ಕೇಳಲು ಸಿದ್ಧರಿಲ್ಲದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈಗಾಗಲೇ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಎಚ್ಚೆತ್ತುಕೊಂಡಿಲ್ಲ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಮೊಹಮ್ಮದ್ ರಿಯಾಜ್ ಆರೋಪಿಸಿದರು.
ಈ ಹಿಂದೆ ಗುಜರಾತ್ನಲ್ಲಿ ನಡೆದ ನರಮೇಧದ ಮಾದರಿಯಲ್ಲಿಯೇ ದೆಹಲಿಯಲ್ಲಿಯೂ ಕಿಚ್ಚು ಹಚ್ಚಲು ಮುಂದಾಗಿದ್ದಾರೆ. ಇದನ್ನು ಸಮಿತಿ ಖಂಡಿಸುತ್ತದೆ. ದೆಹಲಿ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಚಾರ ಅಸ್ತವ್ಯಸ್ತ: ಏಕಾಏಕಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಕೂಡಲೇ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಂಧಿಸಿ ಕರೆದೊಯ್ದರು. ಈ ವೇಳೆ ಪ್ರತಿಭಟನಾನಿರತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.