

ಶಿರಸಿ: ಹೋಳಿ ಹಬ್ಬ ಮತ್ತು ಬೇಡರ ವೇಷ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಶಿರಸಿ ನಗರಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆ ಭಾನುವಾರ ಆಗಮಿಸಿ ನಗರದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿತು.
ನಗರದಲ್ಲಿ ಕಾನೂನು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾದಂತೆ ತಡೆಯಲು ಮುಂಜಾಗ್ರತವಾಗಿ ಅರೆ ಸೇನಾ ಪಡೆ ನಿಯೋಜಿಸಲಾಗಿದ್ದು, ಭಾನುವಾರ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ರಸ್ತೆ, ಶ್ರದ್ದಾನಂದಗಲ್ಲಿ, ಸಿ.ಪಿ. ಬಜಾರ, ನಟರಾಜ ರಸ್ತೆ, ಬಿಡ್ಕಿ ಬೈಲ್, ಮಾರಿಕಾಂಬಾ ದೇವಸ್ಥಾನ ರಸ್ತೆ, ಶಿವಾಜಿ ವೃತ್ತ ಮುಂತಾದ ಕಡೆಗೆ ಪಥ ಸಂಚಲನ ನಡೆಸಿ ಜನರಲ್ಲಿ ಶಾಂತಿ- ಸುವ್ಯವಸ್ಥೆ ಮತ್ತು ನೆಮ್ಮದಿಯ ಭರವಸೆ ಮೂಡಿಸಿದರು.
ಶಿರಸಿ ಉಪವಿಭಾಗದ ಡಿಎಸ್ಪಿ ಕೆ.ಎಲ್. ಗಣೇಶ, ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ವ ಅವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ., ಕ್ಷಿಪ್ರ ಕಾರ್ಯಾಚರಣೆ ಪಡೆ ಇನ್ಸ್ಪೆಕ್ಟರ್ ಎಚ್. ಬಸವರಾಜು, ಮುರುಗನ್ ಅವರ ನೇತೃತ್ವದಲ್ಲಿ ಪಡೆಯ ಸಿಬ್ಬಂದಿ ಹಾಗೂ ನಗರ ಠಾಣೆಯ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.