ಎನ್.ಆರ್.ಪುರ ರಸ್ತೆ ಶೀಘ್ರ ವಿಸ್ತರಣೆ

samnana
ಎನ್.ಆರ್.ಪುರದಲ್ಲಿ ಶಾಸಕ ಹಾಗೂ ಮಾಜಿ ಎಂಎಲ್ಸಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ವರ್ತಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಉದ್ಘಾಟಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಎಂ.ಶ್ರೀನಿವಾಸ್, ಕಮ್ತಿ ವಾಸಪ್ಪಗೌಡ, ಪಿ.ವಿ.ಮಥಾಯಿ ಇದ್ದರು.
Published on

ಎನ್.ಆರ್.ಪುರ: ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ವಾಸವಿ ಸಮುದಾಯಭವನದಲ್ಲಿ ಭಾನುವಾರ ವರ್ತಕರ ಸಂಘ ಆಯೋಜಿಸಿದ್ದ ಶಾಸಕರಿಗೆ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಟ್ಟಣದಲ್ಲಿ ರಸ್ತೆ ವಿಸ್ತರಣೆಗೆ ಕ್ರಿಯಾಯೋಜನೆ ರೂಪಿಸಿ 36 ಕೋಟಿ ರೂ. ಅನುದಾನ ಮಂಜೂರಾತಿ ಹಂತದಲ್ಲಿತ್ತು. ಸರ್ಕಾರ ಬದಲಾಗಿದ್ದರಿಂದ ಅನುದಾನಕ್ಕೆ ತಡೆ ಒಡ್ಡುವ ಮೂಲಕ ಅಭಿವೃದ್ಧಿಗೆ ಅಡ್ಡಿಪಡಿಸಲಾಯಿತು ಎಂದರು.
ಈ ಹಿಂದೆ ಪಟ್ಟಣದಲ್ಲಿ ತಾಲೂಕು ಕಚೇರಿ ಇದ್ದಾಗ ವ್ಯಾಪಾರ ಹೆಚ್ಚಾಗಿತ್ತು. ವರ್ತಕರಿಗೂ ಅನುಕೂಲವಾಗಿತ್ತು. ಈ ಹಿಂದಿನ ಶಾಸಕರು ತಾಲೂಕು ಕಚೇರಿಯನ್ನು ಪಟ್ಟಣದ ಹೊರ ಭಾಗದಲ್ಲಿ ನಿರ್ಮಿಸುವ ಮೂಲಕ ಪಟ್ಟಣಕ್ಕೆ ಆರ್ಥಿಕ ಪೆಟ್ಟು ನೀಡಿದರು ಎಂದು ಆರೋಪಿಸಿದರು.
ಪಟ್ಟಣದ ಹೊರಭಾಗದಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಗುತ್ತಿಗೆ ಪಡೆದು ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡದ ಗುತ್ತಿಗೆ ಅವಧಿ ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಪಟ್ಟಣ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ವರ್ಗಾಯಿಸಿ ಅರಣ್ಯ ಇಲಾಖೆ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗುವುದು. ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಕಾಲವಕಾಶ ಬೇಕು. ಚುನಾವಣಾ ಪೂರ್ವದಲ್ಲಿ ಪಟ್ಟಣದ ವರ್ತಕರಿಗೆ ನೀಡಿರುವ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ಎನ್.ಆರ್.ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿರುವ ಬಹುತೇಕರು ಬಡವರಾಗಿದ್ದು ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಡವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ವರ್ತಕರ ಸಂಘದ ಉಪಾಧ್ಯಕ್ಷ ಡಿ.ವೆಂಕಟೇಶ್, ಕಾರ್ಯದರ್ಶಿ ಪಿ.ವಿ.ಮಥಾಯಿ, ಖಜಾಂಚಿ ಕಮ್ತಿ ವಾಸಪ್ಪಗೌಡ, ಎಸ್.ಎಸ್.ಜಗದೀಶ್, ಟಿ.ಎಂ.ನಾಗರಾಜ್, ನವೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net