ಅತ್ಯಾಚಾರಿಗಳಿಗಳಿಗೆ ಕಠಿಣ ಶಿಕ್ಷೆ ನೀಡಿ

8Ravig8-Web
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಿ.ವಿ. ಕುಲಕರ್ಣಿ, ಮಂದಾ ನೇವಗಿ, ಕೃಷ್ಣಾತಾಯಿ ಬಿಮಾನಾಚೆ ಇದ್ದರು.
Published on

ಬೆಳಗಾವಿ: ಉತ್ತರ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ವಿಧಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಉತ್ತರ ಪ್ರದೇಶದಲ್ಲಿ ಹತ್ರಾಸ್ ಘಟನೆ ಮರೆಯುವ ಮುನ್ನವೇ ಮತ್ತೊಂದು ಅತ್ಯಾಚಾರ ಘಟನೆ ಸಂಭವಿಸಿದೆ. ಆದರೂ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತು ಕ್ರಮ ಜರುಗಿಸಿಲ್ಲ. ಅಲ್ಲಿನ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಸಿಗುತ್ತಿಲ್ಲ. ಕೂಡಲೇ ಅತ್ಯಾಚಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಘಟನೆ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು. ಕೃಷಿ, ಕಾರ್ಮಿಕ, ಖಾಸಗೀಕರಣ ಸೇರಿದಂತೆ ಜನವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಅಂಗನವಾಡಿಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಜಿ.ವಿ.ಕುಲಕರ್ಣಿ, ಮಂದಾ ನೇವಗಿ ಹಾಗೂ ಕೃಷ್ಣಾತಾಯಿ ಬಿಮಾನಾಚೆ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net