

ಮೈಸೂರು: ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದರೂ ಕಾರ್ಯ ನಿರ್ವಹಣೆಯಲ್ಲಿ ವಿಫಲತೆವಾಗಿವೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಜನಸೇವೆ ಮಾಡುತ್ತಿರುವ ವೇಳೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವುದು ಖಂಡನೀಯ. ಜತೆಗೆ ಉತ್ತರಖಂಡದ ಡೆಹ್ರಾಡೂನ್ ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವುದು ಹೇಯ ಕೃತ್ಯ. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒಕ್ಕೂಟದ ವಲಯ ಸಂಯೋಜಕಿ ಆರೋಕ್ಯ ಮೇರಿ ಆಗ್ರಹಿಸಿದರು.
ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣ ನಿರ್ಮಿಸಬೇಕು, ಎಲ್ಲ ಹೆಣ್ಣುಮಕ್ಕಳ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ಒದಗಿಸಬೇಕು, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ, ಕೇಂದ್ರ ಸರ್ಕಾರಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು, ನ್ಯಾಯಾಲಗಳಲ್ಲಿ ಮಹಿಳೆಯರ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು, ಮಹಿಳೆಯರು ನಿರ್ಭೀತಿಯಿಂದ ಜೀವಿಸಲು ಕಾನೂನು ರೀತಿಯಲ್ಲಿ ಸೂಕ್ತ ರಕ್ಷಣೆ ನೀಡಬೇಕು, ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣಗೊಳಿಸಬೇಕು, ಈಗಿರುವ ಶಿಕ್ಷೆಯ ವಿಧಾನ ಬದಲಿಸಿ ಶೀಘ್ರದಲ್ಲಿ ತೀರ್ಪು ನೀಡಿ ಅತ್ಯಾಚಾರಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.