ಬಾಲಕಿ ಮೇಲೆ ಅತ್ಯಾಚಾರ

Police Couple
Published on


ಚಾಮರಾಜನಗರ : ಯಳಂದೂರು ತಾಲೂಕಿನ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣವಾಗಿರುವ ಬಾಲಕನ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


ಒಂದು ತಿಂಗಳಿಂದ ವಿದ್ಯಾರ್ಥಿನಿ ಶಾಲೆಗೆ ಹೋಗಿರಲಿಲ್ಲ. ಈ ಬಗ್ಗೆ ಶಾಲಾ ಸಿಬ್ಬಂದಿ ಬಾಲಕಿ ಮನೆಯವರನ್ನು ವಿಚಾರಿಸಿದಾಗ ಆಕೆಗೆ ಅನಾರೋಗ್ಯ ಉಂಟಾಗಿದೆ ಎಂದು ಪಾಲಕರು ಹೇಳಿದ್ದರು.


ಶಾಲಾ ಸಿಬ್ಬಂದಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದರು. ಈ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಕೂಡಲೇ ಶಿಕ್ಷಕರು 1098ರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಸ್ಥಳಕ್ಕಾಗಮಿಸಿದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಸಂತ್ರಸ್ತೆಯ ಸಮಾಲೋಚನೆ ನಡೆಸಿ, ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಮನವಿ ಮಾಡಿದರೂ ಪಾಲಕರು ಇದನ್ನು ವಿರೋಧಿಸಿದ್ದರು.

ಆದರೆ, ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಿಡಿಒ ಪಟ್ಟಣ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವರಾಜ್‌ಮುಧೋಳ್ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯಿಂದ ಮಹಿಳಾ ಪಿಎಸ್‌ಐ ಹೇಳಿಕೆ ಪಡೆದುಕೊಂಡಿದ್ದು ಮುಂದಿನ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net