

ಮೈಸೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಗುರುವಾರ 20 ವರ್ಷಗಳ ಕಠಿಣ ಸಜೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಾಲಿಗ್ರಾಮ ತಾಲೂಕಿನ ಹಾಡ್ಯ ಗ್ರಾಮದ ಧರ್ಮ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಅಪ್ರಾಪ್ತೆಗೆ ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ 18 ಜನವರಿ 2023 ರಂದು ಅತ್ಯಾಚಾರ ನಡೆಸಿದ್ದ. ಅಪ್ರಾಪ್ತೆಯು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಅಪ್ರಾಪ್ತೆಯ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಂಡ ಸಾಲಿಗ್ರಾಮ ಪೊಲೀಸರು ಧರ್ಮನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಆನಂದ್ ಹೊಗಾಡೆ ವಿಚಾರಣೆ ನಡೆಸಿ ಧರ್ಮ ವಿರುದ್ಧ ಹೊರಿಸಲಾದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ ಜಯಂತಿ ವಾದಿಸಿದರು.